ಬೆಂಗಳೂರು, ಜ.18 (Daijiworld News/PY) : ಪೌರತ್ವ ತಿದ್ದುಪಡಿ ಕಾಯ್ದೆಯ ಜಾಗೃತಿ ಸಮಾವೇಶಕ್ಕಾಗಿ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದ ಸಂದರ್ಭ ಸಂಪುಟ ವಿಸ್ತರಣೆಯ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ದಾವೋಸ್ಗೆ ಹೋಗಿ ಬಂದ ಬಳಿಕ ದೆಹಲಿಗೆ ಬನ್ನಿ ಮಾತನಾಡೋಣ ಎಂದು ಸಿಎಂ ಬಿಎಸ್ವೈಗೆ ಅಮಿತ್ ಶಾ ತಿಳಿಸಿದ್ದಾರೆ ಎನ್ನಲಾಗಿದೆ.
ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ತೊಂದರೆಯಿಲ್ಲ. ನೀವು ವಿದೇಶ ಪ್ರವಾಸ ಮುಗಿಸಿ ದೆಹಲಿಗೆ ಬನ್ನಿ ಜೆ.ಪಿ.ನಡ್ಡಾ, ಬಿ.ಎಲ್.ಸಂತೋಷ್ ಅವರ ಸಮ್ಮುಖದಲ್ಲಿ ಚರ್ಚಿಸಿ ಅಂತಿಮಗೊಳಿಸೋಣ ಎಂದು ತಿಳಿಸಿದರು ಎಂದು ಮೂಲಗಳು ತಿಳಿಸಿವೆ.
ಕೇವಲ ಸಂಪುಟ ವಿಸ್ತರಣೆ, ಖಾತೆ ಹಂಚಿಕೆಯ ಕೆಲಸವಾಗಬಾರದು. ಸರ್ಕಾರವಾಗಿ ರಾಜ್ಯದ ಅಭಿವೃದ್ಧಿಯ ಕಡೆ ಗಮನಹರಿಸಿ ಎಂದು ಸಿಎಂ ಬಿಎಸ್ವೈಗೆ ಅಮಿತ್ ಶಾ ಸೂಚಿಸಿದ್ದಾರೆ ಎನ್ನಲಾಗಿದೆ.
ಉಪ ಮುಖ್ಯಮಂತ್ರಿ ವಿಚಾರದ ಬಗ್ಗೆ ಪ್ರಸ್ತಾಪವಾಗಿ ನಾಲ್ವರು ಉಪ ಮುಖ್ಯಮಂತ್ರಿಗಳ ನೇಮಕಕ್ಕೆ ಅಮಿತ್ ಶಾ ಸೂಚಿಸಿದ್ದು, ಪ್ರಸ್ತುತ ಇರುವವರಲ್ಲಿ ಒಬ್ಬರನ್ನು ತೆಗೆದು ಹೊಸದಾಗಿ ಇಬ್ಬರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಚರ್ಚೆಸಲಾಯಿತು ಎಂದು ತಿಳಿದುಬಂದಿದೆ.