ಬೆಂಗಳೂರು, ಜ 19 (Daijiworld News/MB) : ಇಂದು ಬೆಳಗ್ಗೆ 10.25ಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನಿಯೋಗ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವೋಸ್ ಗೆ ಪ್ರಯಾಣ ಬೆಳೆಸಲಿದೆ.
ಜನವರಿ 20ರಿಂದ 23 ರವರೆಗೆ ಸ್ವಿಝರ್ಲ್ಯಾಂಡ್ನ ದಾವೋಸ್ನಲ್ಲಿ ವಿಶ್ವ ಆರ್ಥಿಕ ಶೃಂಗ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಬಿಎಸ್ವೈ ನೇತೃತ್ವದ ನಿಯೋಗ ಭಾಗಿಯಾಗಲಿದೆ. ಈ ನಿಯೋಗದಲ್ಲಿ ಮುಖ್ಯಮಂತ್ರಿ ಸೇರಿ ಒಟ್ಟು 10 ಜನ ಇರಲಿದ್ದಾರೆ.
ಅಧಿಕೃತವಲ್ಲದೇ ಮೂವರು ಈ ತಂಡದಲ್ಲಿ ಪ್ರಯಾಣ ಮಾಡಲಿದ್ದು, ಸಿಎಂ ಯಡಿಯೂರಪ್ಪ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮತ್ತು ಸಿಎಂ ರಾಜಕೀಯ ಸಲಹೆಗಾರ ಮರಂಕಲ್ ಹಾಗೂ ಮೂವರು ಐಎಎಸ್ ಅಧಿಕಾರಿಗಳು ಸೇರಿ 7 ಅಧಿಕಾರಿಗಳು ದಾವೋಸ್ ಗೆ ಹೊರಟಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ ಭಾಸ್ಕರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಸಿಎಂ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತ ಗುಂಜನ್ ಕೃಷ್ಣ, ಸಿಎಂ ವಿಶೇಷ ಕರ್ತವ್ಯಾಧಿಕಾರಿ ಕೆ.ಪಿ ರುದ್ರಪ್ಪಯ್ಯ ಮತ್ತು ಪಿಎಸ್ ದವಳೇಶ್ವರ್ ಕೂಡಾ ಪ್ರಯಾಣ ಮಾಡಲಿದ್ದಾರೆ.
ದಾವೋಸ್ ಶೃಂಗ ಸಭೆಯಲ್ಲಿ 35 ಜಾಗತಿಕ ಮಟ್ಟದ ಉದ್ಯಮಿಗಳ ಜೊತೆ ಸಿಎಂ ನೇತೃತ್ವದ ನಿಯೋಗ ಸಂವಾದ ನಡೆಸಲಿದ್ದು ರಾಜ್ಯದಲ್ಲಿ ಬಂಡವಾಳ ಹೂಡಲು ವಿದೇಶೀ ಹೂಡಿಕೆದಾರರನ್ನು ಸಿಎಂ ಆಹ್ವಾನಿಸಲಿದ್ದಾರೆ. ಜನವರಿ 24 ರ ರಾತ್ರಿ ಸಿಎಂ ಮತ್ತು ನಿಯೋಗ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.