ಶೃಂಗೇರಿ, ಜ 19 (Daijiworld News/MB) : ಶೃಂಗೇರಿಯ ಕಾಲೇಜು ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಅಪರಾಧಿಗಳಿಗೆ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
ಅಪರಾಧಿಗಳಾದ ಸಂತೋಷ್ ಮತ್ತು ಪ್ರದೀಪ್ ಎಂಬವರು 2016ರ ಫೆಬ್ರವರಿ 16ರಂದು ಶೃಂಗೇರಿಯ ಕಾಲೇಜು ವಿದ್ಯಾರ್ಥಿನಿಗೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದು ಸತತ ನಾಲ್ಕು ವರ್ಷಗಳ ವಿಚಾರಣೆ ನಂತರ ಎಲ್ಲಾ ದಾಖಲೆಗಳನ್ನ ಪರಿಗಣಿಸಿ ನ್ಯಾಯಮೂರ್ತಿ ಉಮೇಶ್ ಎಂ ಅಡಿಗ ಅವರಿದ್ದ ಏಕಸದಸ್ಯ ಪೀಠ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದೆ.
2016ರ ಫೆಬ್ರವರಿ 16ರಂದು ಶೃಂಗೇರಿಯ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಪರೀಕ್ಷೆ ಮುಗಿಸಿ ಕಾಲು ದಾರಿ ಮೂಲಕ ಮನೆಗೆ ಹಿಂದಿರುಗುವಾಗ ಸಂತೋಷ್ ಮತ್ತು ಪ್ರದೀಪ್ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿದ್ದು ಆಕೆಯ ಮೇಲೆ ಅತ್ಯಾಚಾರವೆಸಗಿ ಕುತ್ತಿಗೆ ಬಿಗಿದು ಹತ್ಯೆ ಮಾಡಿ 50 ಅಡಿಯ ಪಾಳು ಬಾವಿಗೆ ಮೃತ ದೇಹವನ್ನು ಎಸೆದಿದು ಪರಾರಿಯಾಗಿದ್ದರು.
ವಿದ್ಯಾರ್ಥಿನಿ ಮನೆಗೆ ಬಾರದ ಹಿನ್ನಲೆಯಲ್ಲಿ ಪೋಷಕರು ಪೋಲೀಸರಿಗೆ ದೂರು ನೀಡಿದ್ದು ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಒರ್ವ ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದರೆ ಇನ್ನೊಬ್ಬ ಪೋಲೀಸರಿಗೆ ಸಿಕ್ಕು ಬಿದ್ದಿದ್ದ. ಈ ಅಪರಾಧಿಗಳು ಈ ಅತ್ಯಾಚಾರ ಪ್ರಕರಣ ಮಾತ್ರವಲ್ಲದೇ ಇನ್ನೂ ಹಲವು ಪ್ರಕರಣದಲ್ಲಿ ತೊಡಗಿದ್ದರು.
ಗಲ್ಲು ಶಿಕ್ಷೆ ತೀರ್ಪು ಪ್ರಕಟವಾಗುತ್ತಿದ್ದಂತೆ ವಿದ್ಯಾರ್ಥಿನಿಯ ತಂದೆ ಮಾದ್ಯಮದೆದುರು ಮಾತನಾಡಿ ಮಗಳನ್ನು ನೆನೆದು ಕಣ್ಣೀರು ಹಾಕಿ "ಇಂದು ನಾವು ಕಣ್ತುಂಬ ನಿದ್ರಿಸುತ್ತೇವೆ. ನನಗೆ ತೃಪ್ತಿಯಾಗಿದೆ. ಕಳೆದ ನಾಲ್ಕು ವರ್ಷದಿಂದ ನಾವು ಸರಿಯಾಗಿ ಊಟ, ನಿದ್ರೆ ಮಾಡಿಲ್ಲ. ಇಂದು ನೆಮ್ಮದಿಯಾಗಿದೆ. ನಮ್ಮ ಸ್ಥಿತಿ ಇನ್ನಾರಿಗೂ ಬರಬಾರದು" ಎಂದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಮೃತ ವಿದ್ಯಾರ್ಥಿನಿಯ ಪರ ಹಿರಿಯ ವಕೀಲ ವಿ.ಜಿ. ಯಲಕೇರಿ ವಾದ ಮಾಂಡಿಸಿದ್ದರು.