ನವದೆಹಲಿ, ಜ.19 (Daijiworld News/PY) : "ದೆಹಲಿಯ ವಿಧಾನಸಭೆ ಚುನಾವಣೆಯ ಟಿಕೆಟ್ ನೀಡಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 10 ಕೋಟಿ ಹಣವನ್ನು ಬೇಡಿಕೆ ಇಟ್ಟಿದ್ದರು" ಎಂದು ಆದರ್ಶ್ ಶಾಸ್ತ್ರಿ ಹೇಳಿದ್ದಾರೆ.
ಶನಿವಾರ ಎಎಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ಆದರ್ಶ್ ಶಾಸ್ತ್ರೀ, ಎಎಪಿಯು 2020ರ ದೆಹಲಿ ವಿಧಾನಸಭಾ ಚುನಾವಣೆಯ ಟಿಕೆಟ್ಗಳನ್ನು 10-20 ಕೋಟಿಗಳಿಗೆ ಮಾರಾಟ ಮಾಡಿದೆ ಎಂದು ತಿಳಿಸಿದ್ದಾರೆ.
ಫೆಬ್ರವರಿ 8ರಂದು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ದ್ವಾರಕಾದಿಂದ ಮತ್ತೆ ಸ್ಪರ್ಧಿಸಲು ಇಚ್ಛಿಸಿದ್ದ ಶಾಸ್ತ್ರಿ ಅವರಿಗೆ ಟಿಕೆಟ್ ನೀಡಲು ಎಎಪಿ ನಿರಾಕರಿಸಿದ್ದು, ಅಲ್ಲದೆ ದ್ವಾರಕಾದಿಂದ ವಿನಯ್ ಮಿಶ್ರಾ ಅವರನ್ನು ಕಣಕ್ಕಿಳಿಸಿದ ಬೆನ್ನಲ್ಲೇ ಅಸಮಾಧಾನಗೊಂಡು ಪಕ್ಷವನ್ನು ತೊರೆದಿದ್ದರು. ಈ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಸುಭಾಷ್ ಚೋಪ್ರಾ ಹಾಗೂ ಎಐಸಿಸಿ ಉಸ್ತುವಾರಿ ಪಿ.ಸಿ ಚಾಕೋ ಅವರ ನೇತೃತ್ವದಲ್ಲಿ ಪಕ್ಷದ ದೆಹಲಿ ಕಚೇರಿಯಲ್ಲಿ ಆದರ್ಶ್ ಶಾಸ್ತ್ರೀ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
ಈ ಹಿಂದೆಯೂ ಎಎಪಿ ವಿರುದ್ಧ ಇದೇ ರೀತಿಯ ಆರೋಪ ಕೇಳಿಬಂದಿದ್ದು, ಲೋಕಸಭಾ ಚುನಾವಣೆಯಲ್ಲಿ ಎಎಪಿಯ ಪಶ್ಚಿಮ ದೆಹಲಿಯ ಅಭ್ಯರ್ಥಿಯಾಗಿದ್ದ ಬಲ್ಬೀರ್ ಸಿಂಗ್ ಜಾಖರ್ ಅವರ ಪುತ್ರ, ಟಿಕೆಟ್ ಪಡೆಯಲು ತನ್ನ ತಂದೆ ಅರವಿಂದ್ ಕೇಜ್ರಿವಾಲ್ಗೆ ಹಣ ನೀಡಿದ್ದರು ಎಂದು ದೂರಿದ್ದರು.
ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ತನ್ನ 54 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಪಕ್ಷ ಸೇರಿದ್ದ ಮಾಜಿ ಎಎಪಿ ಮುಖಂಡ ಅಲ್ಕಾ ಲಂಬಾ ಅವರಿಗೆ ಚಾಂದನಿ ಚೌಕ್ ಕ್ಷೇತ್ರದಿಂದ ಟಿಕೆಟ್ ನೀಡಿದ್ದು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಕೀರ್ತಿ ಆಜಾದ್ ಅವರ ಪತ್ನಿ ಪೂನಮ್ ಆಜಾದ್ ಸಂಗಮ್ ವಿಹಾರದಿಂದ ಸ್ಪರ್ಧಿಸಲಿದ್ದಾರೆ.
ಕೃಷ್ಣನಗರ ಕ್ಷೇತ್ರದಿಂದ, ದೆಹಲಿಯ ಮಾಜಿ ಸಚಿವ ಅಶೋಕ್ ಕುಮಾರ್, ವಾಲಿಯಾ ಬಲ್ಲಿಮಾರನ್ನಿಂದ ಹರೂನ್ ಯೂಸುಫ್, ಸೀಲಾಂಪುರದ ಮಾತೀನ್ ಅಹಮದ್ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಪ್ರಕಟಣೆ ಹೇಳಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಣಕ್ಕಿಳಿಸಲು ನವದೆಹಲಿ ಸ್ಥಾನದಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಇನ್ನೂ ನಿರ್ಧರಿಸಿಲ್ಲ ಎನ್ನಲಾಗಿದೆ.
ಪಾಟ್ಪರ್ಗಂಜ್ನಿಂದ ಡಿಸಿಎಂ ಮನೀಶ್ ಸಿಸೋಡಿಯಾ ವಿರುದ್ಧ ಪಕ್ಷವು ಲಕ್ಷ್ಮಣ ರಾವತ್ ಅವರನ್ನು ಕಣಕ್ಕಿಳಿಸಿದೆ.