ಮೈಸೂರು, ಜ.19 (Daijiworld News/PY) : "ಬಿಜೆಪಿ ನಾಯಕರ ಬಗ್ಗೆ ಟೀಕೆ ಮಾಡುತ್ತಿರುವವರುಬಾಯಿ ಮುಚ್ಚಿಕೊಂಡಿರಬೇಕು. ಅವರ ವಿರುದ್ದ ಹಗುರವಾಗಿ ಮಾತನಾಡುವುದು ಸರಿಯಿಲ್ಲ. ಅವರಿಂದಲೇ ಸರ್ಕಾರ ಬಂದಿದೆ" ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಯ ಕಾರ್ಯ ಆಗುತ್ತದೆ. ಬಿಜೆಪಿ ನಾಯಕರ ವಿರುದ್ದ ಟೀಕೆ ಮಾಡುವುದು ಸರಿಯಲ್ಲ. ಅವರಿಂದಲೇ ಸರ್ಕಾರ ಬಂದಿದೆ. ಸಚಿವಾಕಾಂಕ್ಷಿಗಳ ಋಣ ನಮ್ಮ ಮೇಲಿದೆ. ಅದನ್ನು ತೀರಿಸುವುದು ನಮ್ಮ ಕರ್ತವ್ಯ. ಅವರ ಋಣ ತೀರಿಸುವ ಕಾರ್ಯ ಮಾಡುತ್ತೇವೆ" ಎಂದರು.
ಅಮಿತ್ ಶಾ ಅವರು ರಾಜ್ಯ ಪ್ರವಾಸ ಮಾಡಿದ ಬಗ್ಗೆ ಮಾತನಾಡಿದ ಅವರು, "ಗೃಹ ಸಚಿವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭ ಏನು ಚರ್ಚೆ ನಡೆಸಿದ್ದಾರೆ ಎಂದು ನನಗೆ ತಿಳಿದಿಲ್ಲ. ನಿಮಗೆ ತಿಳಿದಿರುವಷ್ಟು ಮಾಹಿತಿ ಮಾತ್ರ ನನಗೆ ತಿಳಿದಿರುವುದು. ಪೂರ್ಣವಾದ ಬಹುಮತ ಬಾರದ ಹಿನ್ನೆಲೆ ಇಂತಹ ಗೊಂದಲವಾಗಿದೆ. ಶೀಘ್ರವೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ" ಎಂದು ಹೇಳಿದರು.
ಅಮಿತ್ ಶಾ ಭೇಟಿ ವಿಚಾರವಾಗಿ ಕಾಂಗ್ರೆಸ್ ಟೀಕೆ ಮಾಡಿದ ಬಗ್ಗೆ ಮಾತನಾಡಿದ ಈಶ್ವರಪ್ಪ ಅವರು, "ರಾಜ್ಯದ ಜನರು ಅಯೋಗ್ಯ ಸರ್ಕಾರ ಎಂದು ಮನೆಯಲ್ಲಿ ಕೂರಿಸಿದ್ದಾರೆ. ಅವರು ಅಧಿಕಾರದಲ್ಲಿದ್ದ ವೇಳೆ ಜನವಿರೋಧಿ ಕಾರ್ಯ ಮಾಡಿದರು. ಜಾತಿ ಜಾತಿಯನ್ನು ಒಡೆದು, ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚಿದರು. ಈ ಕಾರಣಕ್ಕಾಗಿ ಜನ ಅವರನ್ನು ಮನೆಗೆ ಕಳುಹಿಸಿದ್ದಾರೆ" ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, "ಕುಮಾರಸ್ವಾಮಿ ಅವರು ಸಿನಿಮಾ ಮಾಡಿಕೊಂಡಿರಲಿ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದವರು ಅವರ ಸ್ಥಾನಕ್ಕೆ ತಕ್ಕಂತೆ ಮಾತುಗಳನ್ನಾಡಬೇಕು" ಎಂದು ಹೇಳಿದರು.