ಯಾದಗಿರಿ, ಜ.19 (Daijiworld News/PY) : "ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ, ಅದು ಪಾಕಿಸ್ತಾನ ರಾಷ್ಟ್ರೀಯ ಕಾಂಗ್ರೆಸ್ ಆಗಿದೆ" ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರ ಕೊಲೆಗೆ ಪಿಎಫ್ಐ ಸಂಚು ರೂಪಿಸಿತ್ತು ಎನ್ನುವ ಬಗ್ಗೆ ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಎಸ್ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳು ದೇಶ ಸೆವೆ ಮಾಡುವುದಿಲ್ಲ. ಅವರು ಪಾಕಿಸ್ತಾನದ ಏಜೆಂಟ್ಗಳು. ಇಂತಹ ಸಂಘಟನೆಗಳು ಪಾಕ್ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದೆ. ಈ ಸಂಘಟನೆಗಳು ಎಲ್ಲಾ ಕಡೆ ಕೋಮು ಗಲಭೆ ಮಾಡುವ ಕೆಟ್ಟದಾದ ಉದ್ದೇಶವನ್ನಿಟ್ಟುಕೊಂಡಿದ್ದಾರೆ" ಎಂದರು.
"ದೇಶವಿರೋಧಿ ಚಟುವಟಿಕೆಗಳಿಗೆ ನೆರವು ನೀಡುವ ರಾಜಕೀಯ ನಾಯಕರ ಮೇಲೆ ಗಮನಹರಿಸಬೇಕು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ದೇಶ ಬೇಕಾಗಿಲ್ಲ. ಓಟ್ ಬ್ಯಾಂಕ್ಗಾಗಿ ದೇಶ ಮಾರಾಟ ಮಾಡಿದರೂ ಪರವಾಗಿಲ್ಲ ಎನ್ನುವ ಧೋರಣೆ ಈ ಪಕ್ಷಗಳದ್ದು. ಕಾಂಗ್ರೆಸ್ ಇಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷವಾಗಿ ಉಳಿದಿಲ್ಲ ಬದಲಾಗಿ ಅದು ಪಾಕಿಸ್ತಾನ ರಾಷ್ಟ್ರೀಯ ಕಾಂಗ್ರೆಸ್ ಆಗಿದೆ" ಎಂದು ಹೇಳಿದರು.
"ರಾಜ್ಯದಲ್ಲಿ ದೇಶ ವಿರೋಧಿ ಚಟುವಟಿಕೆ ಮಾಡುವಂತಹ ಯಾವುದೇ ಸಂಘಟನೆಗಳಿದ್ದರೂ ಅದನ್ನು ನಿಷೇಧಿಸಬೇಕು. ಅವುಗಳತ್ತ ಗಮನ ಹರಿಸಬೇಕು. ಗುಪ್ತಚರ ಇಲಾಖೆಯನ್ನು ರಾಜ್ಯದಲ್ಲಿ ಚುರುಕುಗೊಳಿಸಬೇಕು" ಎಂದರು.