ಮುಂಬೈ, ಜ 19 (Daijiworld News/MB) : ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವಿನ ಬೆಳಗಾವಿ ಗಡಿ ವಿವಾದವನ್ನು ಕೇಂದ್ರ ಸರ್ಕಾರ ಮನಸ್ಸು ಮಾಡಿದಲ್ಲಿ ಸುಲಭವಾಗಿ ಬಗೆಹರಿಸಬಹುದು ಎಂದು ಶಿವಸೇನೆಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಹೇಳಿದ್ದಾರೆ.
ಅಮಿತ್ ಶಾ ನೇತೃತ್ವದ ಕೇಂದ್ರ ಗೃಹ ಇಲಾಖೆಯು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುತ್ತದೆ, ಹಾಗಿರುವಾಗ ಬೆಳಗಾವಿ ವಿವಾದ ಬಗೆಹರಿಸುವುದು ಕಠಿಣವಾಗಲಿಕ್ಕಿಲ್ಲ. ಈ ವಿಚಾರದಲ್ಲಿ ಅಮಿತ್ ಶಾ ಅವರು ಗಮನ ಹರಿಸಬೇಕು ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.
ಕೇವಲ ತುಂಡು ಭೂಮಿಗಾಗಿ ಈ ವಿವಾದ ನಡೆಯುತ್ತಿಲ್ಲ ಇದರಲ್ಲಿ ಮರಾಠಿ ಸಂಸ್ಕೃತಿ ಮತ್ತು ಭಾಷೆಯನ್ನು ರಕ್ಷಿಸುವ ಹೋರಾಟವೂ ಅಡಗಿದೆ. ಲಕ್ಷಾಂತರ ಮರಾಠಿ ಜನರು ಬೆಳಗಾವಿಯಲ್ಲಿ ವಾಸಿಸುತ್ತಿದ್ದಾರೆ. ಈ ವಿಚಾರದಲ್ಲಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಚರ್ಚೆ ನಡೆಸುವ ಅಗತ್ಯವಿದೆ ಎಂದು ಮನವಿ ಮಾಡಿಕೊಂಡರು.
ಈ ಹಿಂದಿನ ಮುಂಬೈ ಪ್ರಾಂತ್ಯದಲ್ಲಿದ್ದ ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಹೆಚ್ಚಾಗಿರುವ ಹಿನ್ನಲೆಯಲ್ಲಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎನ್ನುವುದು ಮಹಾರಾಷ್ಟ್ರದ ಒತ್ತಾಯ. ಈ ಹಿನ್ನಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಮಾರ್ಚ್ 2006ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈವರೆಗೂ ಈ ವಿಚಾರಕ್ಕೆ ಸಂಬಂಧಿಸಿ ತೀರ್ಪು ಬಂದಿಲ್ಲ.