ಮಂಡ್ಯ, ಜ.19 (Daijiworld News/PY) : "ಬಿಜೆಪಿಯಲ್ಲಿ ಸಿಗುತ್ತಿರುವ ಗೌರವ ಬೇರೆ ಪಕ್ಷದಲ್ಲಿ ಸಿಕ್ಕಿದ್ದರೆ ನಾವು ಪಕ್ಷ ಬಿಡುತ್ತಿರಲಿಲ್ಲ" ಎಂದು ಕೆ.ಆರ್.ಪೇಟೆ ಬಿಜೆಪಿ ಶಾಸಕ ನಾರಾಯಣಗೌಡ ಹೇಳಿದ್ದಾರೆ.
ಕೆ.ಆರ್ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಚಿವ ಸ್ಥಾನ ಎನ್ನುವುದು ಕೆಲವರಿಗೆ ಮಾತ್ರ ಸುಳ್ಳು. ಸಿಎಂ ಬಿಎಸ್ವೈ ಅವರು ಮಾತಿಗೆ ತಪ್ಪುವವರಲ್ಲ. ಇಲ್ಲಿಯವರೆಗೂ ಅವರು ಮಾತಿಗೆ ತಪ್ಪಿಲ್ಲ. ಸಚಿವ ಸ್ಥಾನ ಸಿಗುವ ವಿಚಾರವಾಗಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ದ" ಎಂದರು.
"ಬಿಜೆಪಿಯಲ್ಲಿ ಸಿಗುತ್ತಿರುವ ಗೌರವ ಬೇರೆ ಪಕ್ಷದಲ್ಲಿ ಸಿಕ್ಕಿದ್ದರೆ ನಾವು ಪಕ್ಷ ಬಿಡುತ್ತಿರಲಿಲ್ಲ. ಬಿಜೆಪಿಯಲ್ಲಿ ನಮ್ಮನ್ನು ಅವರಲ್ಲಿ ಒಬ್ಬರಂತೆ ಕಾಣುತ್ತಿದ್ದಾರೆ. ಬಿಎಸ್ವೈ ಅವರ ಮನೆಗೆ ಹೋದಾಗ ಗೌರವ ತೋರುತ್ತಿದ್ದರು. ಆದರೆ ಹಿಂದಿನ ಪಕ್ಷದಲ್ಲಿ ಶೇ.10ರಷ್ಟು ಸಹ ಗೌರವವಿರಲಿಲ್ಲ. ಅವರು ಮುಖ ಕೊಟ್ಟು ಮಾತನಾಡಿಸುತ್ತಿರಲಿಲ್ಲ" ಎಂದು ಹೇಳಿದರು.
"ಬಿಜೆಪಿಯಲ್ಲಿ ಜನರ ನಡುವೆ ಹೇಗಿರಬೇಕು, ಹೇಗೆ ಕೆಲಸ ಮಾಡಬೇಕು ಎಂಬುವುದರ ಬಗ್ಗೆ ತರಬೇತಿ ನೀಡಿದ್ದಾರೆ. 2 ಬಾರಿ ನಾನು ಜೆಡಿಎಸ್ ಶಾಸಕನಾಗಿದ್ದೆ ಆದರೆ ಆ ಸಂದರ್ಭ ನನಗೆ ಈ ರೀತಿಯಾದ ಮಾಹಿತಿ ನೀಡಿಲ್ಲ" ಎಂದರು.
"ನಾವು 17 ಜನರಿದ್ದೇವೆ. ಸೋತವರಿಗೂ ಮಂತ್ರಿ ಸ್ಥಾನ ಸಿಗಲಿದೆ. ಈ ವಿಚಾರವಾಗಿ ವರಿಷ್ಠರು ಸಿಎಂಗೆ ಸೂಚನೆ ನೀಡಿದ್ದಾರೆ. ನನಗೆ ಯಾವುದೇ ಖಾತೆಯನ್ನು ನೀಡಿದರೂ ನಾನು ನಿಭಾಯಿಸುತ್ತೇನೆ. ಯಾರ್ಯಾರಿಗೆ ಯಾವ ಖಾತೆಯನ್ನು ನೀಡಬೇಕು ಎಂಬುದನ್ನು ಅವರು ತೀರ್ಮಾನಿಸುತ್ತಾರೆ. ಯಾವ ಯಾವ ಜಿಲ್ಲೆಗೆ ಯಾವ ಖಾತೆ ನೀಡಬೇಕು ಎಂಬುದು ಸಿಎಂಗೆ ತಿಳಿದಿದೆ" ಎಂದು ಹೇಳಿದರು.