ನಿಜಾಮಾಬಾದ್, ಜ 19 (Daijiworld News/MB) : ಪ್ರತಿಭಟನೆ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾದ ಹಿನ್ನಲೆಯಲ್ಲಿ ಹೋರಾಟಗಾರರ ಆಸ್ತಿ ಮುಟ್ಟುಗೋಲು ಹಾಕಲು ಕೆಂದ್ರ ಸರ್ಕಾರ ಮುಂದಾಗಿದ್ದು ಈ ವಿಷಯದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆರೋಪ ಮಾಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಆದ ನಷ್ಟವನ್ನು ಪ್ರತಿಭಟನೆ ಮಾಡಿದವರಿಂದ ಆಸ್ತಿ ಜಪ್ತಿ ಮಾಡಿ ನಷ್ಟ ಭರಿಸಲಾಗುವುದು ಎಂದು ಆರ್ಎಸ್ಎಸ್ ಜೊತೆ ಸಂಪರ್ಕ ಹೊಂದಿರುವ ರಾಮ್ ಮಾಧವ್ ಅವರು ಹೇಳಿದ್ದರು. ಜಾಟ್ ಹಾಗೂ ಪಟೇಲರ ಪ್ರತಿಭಟನೆ ಸಂದರ್ಭದಲ್ಲೂ ಕೋಟಿಗಟ್ಟಲೆ ಆಸ್ತಿ ಪಾಸ್ತಿಗಳು ನಷ್ಟವಾಗಿದೆ. ಅಂದು ಪ್ರತಿಭಟನೆ ನಡೆಸಿದವರ ಆಸ್ತಿಪಾಸ್ತಿಯನ್ನು ಯಾಕೆ ಜಪ್ತಿ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಹಾಗೆಯೇ ಉತ್ತರಪ್ರದೇಶದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ರೂ.14.5 ಲಕ್ಷ ನಷ್ಟ ಉಂಟಾಗಿದೆ. ಜಾಟ್ ಸಮುದಾಯ ನಡೆಸಿದ್ದ ಪ್ರತಿಭಟನೆಯಿಂದಾಗಿ ರೂ.2,000 ಕೋಟಿ ನಷ್ಟ ಎದುರಾಗಿದೆ. ಆದರೆ ಯಾರಿಗೂ ನೊಟೀಸ್ ನೀಡಿಲ್ಲ. ಇದು ಅನ್ಯಾಯ? ಹಿಂದೂಗಳೆಂಬ ಕಾರಣಕ್ಕೆ ಜಾಟ್ ಹಾಗೂ ಪಟೇಲ್ ಹೋರಾಟಗಾರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ನಿಮಗೆ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.