ಹೊಸದಿಲ್ಲಿ, ಜ.19 (Daijiworld News/PY) : "ಜಮ್ಮು-ಕಾಶ್ಮೀರದಲ್ಲಿ ಕೆಟ್ಟ ಸಿನಿಮಾಗಳನ್ನು ನೋಡಲು ಮಾತ್ರ ಇಂಟರ್ನೆಟ್ ಬಳಕೆಯಾಗುವುದು, ಹಾಗಾಗಿ ಅಲ್ಲಿ ಇಂಟರ್ನೆಟ್ ನಿಷೇಧದಿಂದ ಯಾವುದೇ ಆರ್ಥಿಕವಾದ ನಷ್ಟವಿಲ್ಲ" ಎಂದು ನೀತಿ ಆಯೋಗದ ಸದಸ್ಯ ವಿ.ಕೆ ಸಾರಸ್ವತ್ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಜಮ್ಮು-ಕಾಶ್ಮೀರಕ್ಕೆ ಯಾಕೆ ಹೋಗುತ್ತಾರೆ. ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಕಾಶ್ಮೀರದಲ್ಲಿ ಮಾಡಲು ಹೋಗುತ್ತಾರೆ. ಸಾಮಾಜಿಕ ಜಾಲತಾಣಗಳನ್ನು ಬಳಸುವ ಮೂಲಕ ಕಾಶ್ಮೀರದಲ್ಲಿ ಪ್ರತಿಭಟನೆಯನ್ನು ಸೃಷ್ಠಿಸುತ್ತಾರೆ. ಹೀಗಾಗಿ ಅಲ್ಲಿ ಇಂಟರ್ನೆಟ್ ಇಲ್ಲದಿದ್ದರೆ ಏನಾಗಬಹುದು. ಅಲ್ಲಿಯವರು ಇಂಟರ್ನೆಟ್ನಲ್ಲಿ ಏನು ನೋಡುತ್ತಾರೆ. ಕೆಟ್ಟ ಸಿನಿಮಾಗಳನ್ನು ನೋಡುತ್ತಾರೆಯೇ ಹೊರತು ಬೇರೆನೂ ಮಾಡುವುದಿಲ್ಲ" ಎಂದು ಹೇಳಿದರು.
2019ರ ಆ.5ರಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ಸಂದರ್ಭ ಕೇಂದ್ರ ಸರ್ಕಾರ ಇಂಟರ್ನೆಟ್ ಹಾಗೂ ದೂರವಾಣಿ ಸಂಪರ್ಕವನ್ನು ರದ್ದು ಮಾಡಿತ್ತು. ಈಗ ಜಮ್ಮು-ಕಾಶ್ಮೀರದಲ್ಲಿ ನಿಷೇಧ ಸಡಿಸಲಾಗಿದ್ದು, ಪ್ರೀಪೆಯ್ಡ್ ಮೊಬೈಲ್ ಸೇವೆಯನ್ನು ಜ.18 ಶನಿವಾರದಿಂದ ಪ್ರಾರಂಭಿಸಲಾಗಿದೆ ಹಾಗೂ 2ಜಿ ಇಂಟರ್ನೆಟ್ ಸಹ ಮರು ಪ್ರಾರಂಭಿಸಿಲಾಗಿದೆ.