ಚೆನ್ನೈ, ಜ.19 (Daijiworld News/PY) : "2016ರಲ್ಲಿ ಪಾಕಿಸ್ತಾನ ಮೂಲದ ಗಾಯಕ ಅದ್ನಾನ್ ಸಾಮಿ ಹಾಗೂ ಬಾಂಗ್ಲಾದೇಶ ಮೂಲದ ಲೇಖಕಿ ತಸ್ಲಿಮಾ ನಸ್ರೀನ್ ಅವರಿಗೆ ಪೌರತ್ವ ನೀಡಿದ್ದೇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ."
ಚೆನ್ನೈನಲ್ಲಿ ಮಾತನಾಡಿದ ಅವರು, "ಕಳೆದ 6 ವರ್ಷಗಳಲ್ಲಿ ಪಾಕಿಸ್ತಾನದ 2838, ಅಫ್ಘಾನಿಸ್ತಾನದ 914, ಬಾಂಗ್ಲಾದೇಶದ ನಿರಾಶ್ರಿತರಿಗೆ ಭಾರತದ ಪೌರತ್ವ ಕೊಡಲಾಗಿದೆ. ಇದರಲ್ಲಿ ಮುಸ್ಲಿಮರೂ ಒಳಗೊಂಡಿದ್ದಾರೆ. 1964 ರಿಂದ 2008ರ ಅವಧಿಯಲ್ಲಿ ಸುಮಾರು 4 ಲಕ್ಷ ಶ್ರೀಲಂಕಾದ ತಮಿಳರಿಗೆ ಪೌರತ್ವ ನೀಡಲಾಗಿದೆ. 2014ರವರೆಗೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಿಂದ ಬಂದಂತಹ ಸುಮಾರು 566 ಮುಸ್ಲಿಮರಿಗೆ ಪೌರತ್ವ ನೀಡಲಾಗಿದೆ" ಎಂದು ತಿಳಿಸಿದರು.
"2016–2018ರ ಅವಧಿಯಲ್ಲಿ ಅಫ್ಘಾನಿಸ್ತಾನದ ಮುಸ್ಲಿಮರಿಗೆ ಹಾಗೂ ಪಾಕಿಸ್ತಾನದ ಸುಮಾರು1,595 ಮಂದಿ ವಲಸಿಗರಿಗೆ ಪೌರತ್ವ ನೀಡಲಾಗಿದೆ. 2016ರಲ್ಲಿ ಅದ್ನಾನ್ ಸಾಮಿ ಹಾಗೂ ಲೇಖಕಿ ತಸ್ಲಿಮಾ ನಸ್ರೀನ್ಗೂ ಪೌರತ್ವ ನೀಡಲಾಗಿದೆ. ಈ ಅಂಶಗಳು, ನಮ್ಮ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಸುಳ್ಳು ಎಂಬುದನ್ನು ಸಾಬೀತುಪಡಿಸಿವೆ" ಎಂದು ಹೇಳಿದ್ದಾರೆ.