ಚಿಕ್ಕಬಳ್ಳಾಪುರ, ಜ.19 (Daijiworld News/PY) : "ಮುಂದಿನ ಮೂರುವರೆ ವರ್ಷ ಸಿಎಂ ಆಗಿ ಕಾರ್ಯ ನಿರ್ವಹಿಸಲಿರುವ ಬಿಎಸ್ ಯಡಿಯೂರಪ್ಪ ಅವರು ನಂತರ ಚುನಾವಣೆಗಳಿಂದ ದೂರ ಉಳಿದು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧಾರಿಸಿದ್ದಾರೆಂದು" ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಕಾರ್ಯಕಾರಣಿ ಸದಸ್ಯ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, "ನಾನು ತಿಂಗಳ ಹಿಂದೆ ಬಿಎಸ್ವೈ ಅವರನ್ನು ಭೇಟಿಯಾಗಿದ್ದೆ. ಮೂರುವರೆ ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ರೈತರ, ದುರ್ಬಲ ವರ್ಗಗಳ ಏಳಿಗೆಗಾಗಿ ಕೆಲಸ ಮಾಡುತ್ತೇನೆ. ಬಳಿಕ ನಾನು ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನನಗೆ ಪಕ್ಷ ಹಾಗೂ ಜನರು ಎಲ್ಲಾ ರೀತಿಯ ಜವಾಬ್ದಾರಿ ಹಾಗೂ ಅಧಿಕಾರ ನೀಡಿದ್ದಾರೆ. ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆ" ಎಂದು ಬಿಎಸ್ವೈ ಖುದ್ದಾಗಿ ನನ್ನ ಬಳಿ ಹೇಳಿರುವುದಾಗಿ ಪ್ರಭಾಕರ್ ಭಟ್ ತಿಳಿಸಿದರು.
"ಮುಂದಿನ ಮೂರುವರೆ ವರ್ಷಗಳ ಕಾಲ ಸಿಎಂ ಬಿಎಸ್ವೈ ಅವರ ನೇತೃತ್ವದಲ್ಲಿ ಸರ್ಕಾರ ನಡೆಯಲಿದೆ. ಸರ್ಕಾರದ ಬಗ್ಗೆ ಯಾವುದೇ ಗೊಂದಲವಿಲ್ಲ. ಯಡಿಯೂರಪ್ಪ ಅವರು ಜನರಿಗಾಗಿ ಏನಾದರೂ ಮಾಡಬೇಕೆಂದುಕೊಂಡಿರುವ ವ್ಯಕ್ತಿ. ಇಡೀ ದೇಶದಲ್ಲಿ ರೈತರ ಬಜೆಟ್ ತಂದವರು ಯಾರಾದರೂ ಇದ್ದರೆ ಅದು ಯಡಿಯೂರಪ್ಪ ಅವರು. ಕಳೆದ 60 ವರ್ಷಗಳಲ್ಲಿ ಯಾರೂ ಮಾಡದ ಕಾರ್ಯವನ್ನು ಯಡಿಯೂರಪ್ಪ ಅವರು ಮಾಡಿದ್ದಾರೆ. ಹಾಗಾಗಿ ಅವರು ರೈತರ ಬಗ್ಗೆ ತಿಳಿದಿರುವ ರಾಜಕಾರಣಿ" ಎಂದು ಹೇಳಿದರು.
"ಕಳೆದ 42 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿದ ವ್ಯಕ್ತಿ. ಜಾತಿ, ಹಣದ ಆಧಾರದ ಮೇಲೆ ಅವರಿಗೆ ಮುಖ್ಯಮಂತ್ರಿ ಸ್ಥಾನ ದೊರಕಿದೆ ಎನ್ನುವುದು ತಪ್ಪು. ಸತತವಾಗಿ ಹೋರಾಟ ನಡೆಸಿಕೊಂಡು ಬಂದ ಕಾರಣದಿಂದ ಅವರು ಮುಖ್ಯಮಂತ್ರಿಯಾಗಿದ್ದಾರೆ" ಎಂದರು.