ನವದೆಹಲಿ, ಜ 20 (Daijiworld News/MB): ಬ್ಯಾಂಕ್ ಒಕ್ಕೂಟಗಳು ಜನವರಿ 31 ರಿಂದ ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ.
ಈ ಮುಷ್ಕರಕ್ಕೆ ಒಂಬತ್ತು ಕಾರ್ಮಿಕ ಸಂಘಟನೆಗಳನ್ನು ಪ್ರತಿನಿಧಿಸುವ ಯುನೈಟೆಡ್ ಪೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ ಬಿಯು) ಕರೆ ನೀಡಿದೆ. ಹಾಗೆಯೇ ಮಾರ್ಚ್ 11 ರಿಂದ 13 ರವರೆಗೆ ಮೂರು ದಿನಗಳ ಕಾಲ ಮುಷ್ಕರ ನಡೆಸುವುದಾಗಿಯೂ ಹೇಳಿದೆ.
ಈ ಕುರಿತು ಮಾತನಾಡಿದ ಯುಎಫ್ಬಿಯು ಸಂಚಾಲಕ ಸಂಜೀವ್ ಕುಮಾರ್ ಬಂಡ್ಲಿಶ್ "ತಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ ಏಪ್ರಿಲ್ 1 ರಿಂದ ನಾವು ಅನಿರ್ದಿಷ್ಟ ಮುಷ್ಕರ ನಡೆಸಲು ನಿರ್ಧರಿಸಿದ್ದೇವೆ" ಎಂದು ತಿಳಿಸಿದ್ದಾರೆ.
ಈಗಾಗಲೇ ಈ ಕುರಿತಾಗಿ ಭಾರತೀಯ ಬ್ಯಾಂಕ್ ಅಸೋಸಿಯೇಷನ್ ಮುಖ್ಯಸ್ಥರು, ಹಣಕಾಸು ಸೇವಾ ಇಲಾಖೆಯ ಕಾರ್ಯದರ್ಶಿ ಹಾಗೂ ಕಾರ್ಮಿಕ ಆಯೋಗದ ಮುಖ್ಯ ಕಾರ್ಮಿಕ ಆಯುಕ್ತರಿಗೆ ಪತ್ರವನ್ನು ರವಾನಿಸಲಾಗಿದ್ದು ವೇತನ ಪರಿಷ್ಕರಣೆ, ಐದು ದಿನ ಬ್ಯಾಂಕಿಂಗ್ ಸೇವೆ, ಹೊಸ ಪಿಂಚಣಿ ವ್ಯವಸ್ಥೆ ರದ್ದು ಸೇರಿದಂತೆ ಸುಮಾರು 12 ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.