ರಾಮನಗರ, ಜ.20 (Daijiworld News/PY) : "ನಾನು ಹುಟ್ಟಿದ್ದು ಹಾಸನ ಜಿಲ್ಲೆಯಲ್ಲಿ. ಆದರೆ ಕರ್ಮ ಭೂಮಿಯಾದ ಕೇತುಗನಹಳ್ಳಿಯಲ್ಲಿ ನನ್ನ ಅಂತಿಮ ಬದುಕು ಸಮಾಪ್ತಿಯಾಗಲಿದೆ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರ ತಾಲೂಕಿನ ಕೇತುಗನ ಹಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, "ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸಮಗ್ರ ಅಭಿವೃದ್ದಿಗಾಗಿ ಯೋಜನೆಯನ್ನು ರೂಪಿಸಿದ್ದೆ. ಆದರೆ ಅವುಗಳನ್ನು ಪೂರ್ಣಗೊಳಿಸಲು ನನಗೆ ಅವಕಾಶ ದೊರಕಲಿಲ್ಲ" ಎಂದರು.
"ನಾನು ಸಿಎಂ ಆಗಿದ್ದ ಅವಧಿಯಲ್ಲಿ ರೈತರ ಸಾಲಮನ್ನ ಮಾಡಿದ್ದ ಕಾರಣದಿಂದ ರಾಜ್ಯದ ಅಭಿವೃದ್ದಿ ಕುಂಠಿತಗೊಂಡಿದೆ ಎಂದು ಬಿಜೆಪಿ ಮುಖಂಡರು ಹೇಳಿದ್ದರು. ಆದರೆ ಸಾಲಮನ್ನ ಮಾಡಲು 14 ಸಾವಿರ ಕೋಟಿ ಹಣವನ್ನು ವಿವಿಧ ಮೂಲಗಳಿಂದ ಸಂಗ್ರಹ ಮಾಡಿದ್ದೆ. ಹೀಗಾಗಿ ಇದರಿಂದ ರಾಜ್ಯದ ಅಭಿವೃದ್ದಿಯಾಗಿದೇ ಹೊರತು ಯಾವುದೇ ರೀತಿಯ ಸಮಸ್ಯೆಯಾಗಿಲ್ಲ" ಎಂದು ತಿಳಿಸಿದರು.
ಎಸ್ಡಿಪಿಐ ಸಂಘಟನೆ ಬ್ಯಾನ್ ವಿಚಾರವಾಗಿ ಮಾತನಾಡಿ ಅವರು, "ನಾನು ವಿಷಯಗಳ ಸಂಪೂರ್ಣವಾಗಿ ತಿಳಿದ ನಂತರವೇ ಮಾತನಾಡುವುದು. ಯಾವುದನ್ನೂ ಅವಸರವಾಗಿ ಮಾತನಾಡುವುದಿಲ್ಲ. ಬಿಜೆಪಿಯವರು ಕಲ್ಲು ಹೊಡೆದ ವಿಚಾರವನ್ನು ಈಗ ಹೇಳುತ್ತಿದ್ದಾರೆ ಆದರೆ ಆಗ ಯಾಕೆ ಹೇಳಿಲ್ಲ. ಅಲ್ಲಿ ಸಭೆ ನಡೆದ ಸಂದರ್ಭ ಕಲ್ಲು ಬಿತ್ತು ಎಂದು ಯಾಕೆ ಹೇಳಲಿಲ್ಲ . ವಿಷಯವನ್ನು ತಿರುಚಲು ಮುಂದಾಗಿದ್ದಾರೆ" ಎಂದು ಹೇಳಿದರು.