ಚೆನ್ನೈ, ಜ.20 (Daijiworld News/PY) : ಪೊಂಗಲ್ ಹಬ್ಬದ ಪ್ರಯುಕ್ತ ತಮಿಳುನಾಡಿನಲ್ಲಿ ನಡೆದ ಜಲ್ಲಿಕಟ್ಟು ಕ್ರೀಡೆಯ ವೇಳೆ ಅವಘಡ ಸಂಭವಿಸಿ ಓರ್ವ ಸಾವನ್ನಪ್ಪಿದ್ದು, ಸುಮಾರು 60 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 30 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಜಲ್ಲಿಕಟ್ಟು ಕ್ರೀಡೆಯನ್ನು ಸೇಂಟ್ ಆಂಟೋನಿ ಚರ್ಚ್ ಫೆಸ್ಟಿವಲ್ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ವಿವಿಧ ಕಡೆಗಳಿಂದ ಯುವಕರು ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸಲು ಆಗಮಿಸಿದ್ದರು.
ಈ ವೇಳೆ ಒಂದು ಹೋರಿ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 600 ಹೋರಿಗಳು ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸಿದ್ದವು. ಕಾರ್ಯಕ್ರಮದಲ್ಲಿ ತಮಿಳುನಾಡಿನ ಸಚಿವ ಜಿ.ಭಾಸ್ಕರನ್ ಹಾಗೂ ಜಿಲ್ಲಾಧಿಕಾರಿ ಜಯಕಾಂತನ್ ಪಾಲ್ಗೊಂಡಿದ್ದರು.
ಈ ಬಾರಿ ತಮಿಳುನಾಡಿನ ಮೂರು ಕಡೆ ಜಲ್ಲಿಕಟ್ಟು ಸ್ಪರ್ಧೆ ಆಯೋಜಿಸಲಾಗಿದ್ದು, ಮಧುರೈ ಸಮೀಪದ ಅವನಿಪುರಂ, ಪಲಮೇಡು ಹಾಗೂ ಅಲಂಕನಲ್ಲೂರಿನಲ್ಲಿ ನಡೆದಿದೆ.