ನವದೆಹಲಿ, ಜ.20 (Daijiworld News/PY) : "ಈವರೆಗೆ ಭಾಗವಹಿಸಿದ್ದ ಎಲ್ಲಾ ಕಾರ್ಯಕ್ರಮಗಳಲ್ಲಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವು ನನಗೆ ತುಂಬಾ ಇಷ್ಟವಾದ ಕಾರ್ಯಕ್ರಮ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಸೋಮವಾರ ನಡೆದ ಪರೀಕ್ಷಾ ಪೇ ಚರ್ಚೆ-2020ರಲ್ಲಿ ಮಾತನಾಡಿದ ಅವರು, "ಪ್ರಧಾನ ಮಂತ್ರಿಯಾಗಿ ನಾನು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಎಲ್ಲವೂ ನನಗೆ ಹೊಸ ಅನುಭವವಾಗಿದೆ. ಆದರೆ, ಇಲ್ಲಿಯವರೆಗೆ ಭಾಗವಹಿಸಿದ್ದ ಕಾರ್ಯಕ್ರಮಗಳಲ್ಲಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವು ನನಗೆ ಇಷ್ಟವಾದ ಕಾರ್ಯಕ್ರಮವಾಗಿದೆ. ದೇಶದ ಸಾವಿರಾರು ಶಾಲೆಯ ಮಕ್ಕಳು ಇದರಲ್ಲಿ ಪಾಲ್ಗೊಂಡಿದ್ದು, ಯಾವ ರೀತಿ ದೇಶದ ಯುವಜನ ಯೋಚಿಸುತ್ತಾರೆ ಹಾಗೂ ಅವರು ಏನು ಮಾಡುತ್ತಾರೆ ಎನ್ನುವ ಬಗ್ಗೆ ಕುತೂಹಲವಿದೆ" ಎಂದರು.
ವರ್ಷದ ಆರಂಭದಲ್ಲಿ ಪ್ರಧಾನಿ ಮೋದಿ ಅವರು ದೇಶದ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಕುರಿತು ಪಾಠ ಮಾಡುತ್ತಾ, ವಿದ್ಯಾರ್ಥಿಗಳ ಹಲವು ಸಂದೇಹಗಳಿಗೆ ಉತ್ತರ ಕೊಟ್ಟಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಹೇಗಿರಬೇಕು, ಬೋರ್ಡಿಂಗ್ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು, ಹೇಗೆ ಅಧ್ಯಯನ ಮಾಡಬೇಕು ಇತ್ಯಾದಿ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.
ಈ ವೇಳೆ ಚಂದ್ರಯಾನ-2 ಬಗ್ಗೆ ಉದಾಹರಣೆ ನೀಡಿ ಪ್ರಧಾನಿ ಮೋದಿ, "ವಿದ್ಯಾರ್ಥಿಗಳು ಕಲಿಕೆ ಮತ್ತು ಇತರ ಚಟುವಟಿಕೆಗಳಲ್ಲಿ ಎಂದಿಗೂ ಉತ್ಸಾಹ ಕಳೆದುಕೊಳ್ಳಬಾರದು ಎಂಬ ವಿಷಯಕ್ಕೆ ಚಂದ್ರಯಾನ-2 ಉದಾಹರಣೆಯಾಗಿದೆ" ಎಂದರು.
"ಎಂದಿಗೂ ವಿಶ್ವಾಸ, ಉತ್ಸಾಹ ಕಳೆದುಕೊಳ್ಳಬಾರದು, ನಮಗೆ ಬೇರೆಯವರಿಂದ ಅತಿಯಾದ ನಿರೀಕ್ಷೆಯಿದ್ದಾಗ ಈ ಸಮಸ್ಯೆ ಸೃಷ್ಠಿಯಾಗುತ್ತದೆ. ನಾವು ಅಂದುಕೊಂಡ ಕೆಲಸ ಈಡೇರದಿದ್ದಾಗ ನಿರಾಶೆಯಾಗುತ್ತದೆ" ಎಂದು ವಿದ್ಯಾರ್ಥಿಗಳಿಗೆ ಜೀವನದ ಪಾಠ ಮಾಡಿದ್ದಾರೆ.