ಪುಲ್ವಾಮ, ಜ 20 (Daijiworld News/MB) : ಸೋಮವಾರ ಮುಂಜಾನೆ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ವಾಚಿ ಗ್ರಾಮದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದೆ.
ಎನ್ಕೌಂಟರ್ಗೆ ಬಲಿಯಾದ ಓರ್ವ ಉಗ್ರನನ್ನು ಶೋಪಿಯಾನದ ಜೈನಪೋರಾ ಗ್ರಾಮದ ಅದಿಲ್ ಶೇಖ್ ಎಂದು ಗುರುತಿಸಲಾಗಿದೆ. ಈತನಿಗೆ ಸೆಪ್ಟೆಂಬರ್ 29, 2018ರಂದು ಶ್ರೀನಗರದ ಜವಾಹರ್ ನಗರದಲ್ಲಿರುವ ಅಂದಿನ ಪಿಡಿಪಿ ಶಾಸಕ ಅಜಾಜ್ ಮಿರ್ ಅವರ ನಿವಾಸದಿಂದ ಎಂಟು ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡುವ ಜವಾಬ್ದಾರಿಯನ್ನು ಇವನ್ನದ್ದಾಗಿತ್ತು. ಮತ್ತೋರ್ವನನ್ನು ವಾಸೀಂ ವಾನಿ ಎಂದು ಗುರುತಿಸಲಾಗಿದ್ದು, ಉರ್ಪೊರಾ ಗ್ರಾಮದವನು. ಮತ್ತೋರ್ವ ಉಗ್ರನ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಉಗ್ರರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದು, ಹಲವಾರು ಉಗ್ರ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು.
ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ 55 ಮತ್ತು ಜಮ್ಮು ಮತ್ತು ಕಾಶ್ಮೀರದ ವಿಶೇಷ ಪೊಲೀಸ್ ಪಡೆಗೆ ಗ್ರಾಮದಲ್ಲಿ ಇಬ್ಬರು ಅಥವಾ ಮೂವರು ಉಗ್ರರು ಅಡಗಿರುವ ಖಚಿತ ಮಾಹಿತಿ ದೊರೆತ ಮೇರೆಗೆ ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡಿತ್ತು. ನಿವಾಸಗಳಲ್ಲಿ ಅಡಗಿದ್ದ ಉಗ್ರರು ಕಾರ್ಯಾಚರಣೆ ಸಂದರ್ಭದಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು ಈ ವೇಳೆ ಭದ್ರತಾ ಪಡೆಗಳು ಎನ್ಕೌಂಟರ್ ನಡೆಸಿದ್ದಾರೆ.