ನವದೆಹಲಿ, ಜ.20 (Daijiworld News/PY) : ಅಲಹಾಬಾದ್ನ ಹೆಸರನ್ನು ಪ್ರಯಾಗ್ ರಾಜ್ ಎಂದು ಬದಲಾಯಿಸುವ ವಿಚಾರವಾಗಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್ ಯುಪಿ ಸರ್ಕಾರಕ್ಕೆ ನೋಟೀಸ್ ನೀಡಿದೆ.
2018ರಲ್ಲಿ ಆದಿತ್ಯನಾಥ್ ಸರ್ಕಾರವು ಅಲಹಾಬಾದ್ನ ಹೆಸರನ್ನು ಪ್ರಯಾಗ್ ರಾಜ್ ಎಂದು ಬದಲಾಯಿಸಿತ್ತು.
ಯುಪಿ ಸರ್ಕಾರವು ರೈಲ್ವೆ ನಿಲ್ದಾಣ, ಕೇಂದ್ರ ವಿಶ್ವವಿದ್ಯಾಲಯಗಳು ಹಾಗೂ ಇತರ ಸಂಸ್ಥೆಗಳ ಹೆಸರನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ, ಅವುಗಳು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿವೆ ಎಂದು ದೂರುದಾರರು ತಿಳಿಸಿದ್ದಾರೆ.
500 ವರ್ಷಗಳ ಹಿಂದೆ ಮೊಘಲ್ ಸಾಮ್ರಾಟ ಅಕ್ಬರ್ ಮಾಡಿದ ತಪ್ಪನ್ನು ಸರಿಪಡಿಸುವ ಸಲುವಾಗಿ ಐತಿಹಾಸಿಕ ನಗರ ಅಲಹಾಬಾದ್ ಹೆಸರನ್ನು ಪ್ರಯಾಗ್ ರಾಜ್ ಎಂದು ಉತ್ತರ ಪ್ರದೇಶ ಸರ್ಕಾರ ಮರು ನಾಮಕರಣ ಮಾಡಿದೆ. ಅಕ್ಬರ್ ಬದಲಾವಣೆ ಮಾಡಿದ ನಗರದ ಹಳೆಯ ಹೆಸರನ್ನು ಮತ್ತೆ ಇಡಲಾಗಿದೆ ಎಂದು ಬಿಜೆಪಿ ಸರ್ಕಾರ ಹೇಳುತ್ತಿದೆ ಎನ್ನಲಾಗಿದೆ.
ಪ್ರತಿಪಕ್ಷಗಳು, ಚಿಂತಕರು ಹಾಗೂ ಇತಿಹಾಸಕಾರರು ಹೆಸರು ಬದಲಾವಣೆಯ ವಿಚಾರವಾಗಿ ತೀವ್ರವಾಗಿ ಟೀಕಿಸುತ್ತಿದ್ದು, ಸರ್ಕಾರದಿಂದ ಇತಿಹಾಸವನ್ನು ತಿರುಚುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಅಕ್ಬರ್ ಅಲಹಾಬಾದ್ ನಗರವನ್ನು ವಶಪಡಿಸಿಕೊಳ್ಳುವ ಮುನ್ನ ಪ್ರಯಾಗ್ ಎಂದು ಕರೆಯಲಾಗುತಿತ್ತು. 1575ರಲ್ಲಿ ಅಕ್ಬರ್ ಅಲಹಾಬಾದ್ ಎಂದು ಹೆಸರಿಟ್ಟರು. ಅಕ್ಬರ್ನ ಆಸ್ಥಾನದಲ್ಲಿದ್ದ ಅಬುಲ್ ಫಜಲ್ ಸೇರಿದಂತೆ ಕೆಲವು ಇತಿಹಾಸಕಾರರು ಇದನ್ನು ಪ್ರಯಾಗ್ ಎಂದು ಕರೆದಿದ್ದರು. ಋಗ್ವೇದ ಹಾಗೂ ಹಲವು ಪುರಾಣಗಳಲ್ಲಿ ಈ ನಗರದ ಉಲ್ಲೇಖವಿದ್ದು, ಭಾರತದಲ್ಲಿ ಧಾರ್ಮಿಕ ಮೌಲ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗುತ್ತಿತ್ತು ಎನ್ನಲಾಗಿದೆ.