ರಾಮನಗರ, ಜ.20 (Daijiworld News/PY) : "ನನ್ನನ್ನು ಕ್ಯಾನ್ಸರ್ ಸಾವಿನ ದವಡೆಗೆ ನೂಕಿರುವುದು ಸತ್ಯ. ಪವಾಡ ಸದೃಶ್ಯ ರೀತಿಯಲ್ಲಿ ನಾನು ಬದುಕಿದ್ದೇನೆ" ಎಂದು ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಹೇಳಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ವರ್ಷದ ಹಿಂದೆ ಕುಕ್ಕೆಗೆ ಹೋಗುವ ವೇಳೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಬಳಿಕ ಪರೀಕ್ಷೆ ಮಾಡಿದಾಗ ಲಿವರ್ ಕ್ಯಾನ್ಸರ್ ಇದೆ ಎಂದು ತಿಳಿದುಬಂತು. ಬಳಿಕ ದೆಹಲಿಯ ಮ್ಯಾಕ್ಸ್, ಚೆನ್ಮೈನ ಅಪೋಲೊ , ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದೆ" ಎಂದು ಹೇಳಿದರು.
"ಶೇ.90ರಷ್ಟು ಗುಣ ಆಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ ನಂತರ ಮೆದುಳಿಗೆ ಕ್ಯಾನ್ಸರ್ ತಗುಲಿತ್ತು. ಕೆಲ ತಿಂಗಳಷ್ಟೆ ಬದುಕುವುದಾಗಿ ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಬಿಡದಿಗೆ ಪುನಃ ತೆರಳಿದ್ದೇನೆ. ನನಗೀಗ 68 ವರ್ಷ. 5 ಗುಂಡು ಬಿದ್ದರೂ ಬದುಕಿದ್ದೇನೆ. ನಾನು ಸಾವಿಗೆ ಅಂಜುವುದಿಲ್ಲ. ವಿಲ್ ಪವರ್ನಿಂದ ಬದುಕುತ್ತಿದ್ದೇನೆ. ಸಮಾಜ ಸೇವೆ ಮುಂದುವರೆಸುತ್ತೇನೆ" ಎಂದರು.
"ವರ್ಷಕ್ಕೆ 25-30 ಕೋಟಿ ತೆರಿಗೆ ಪಾವತಿ ಮಾಡುತ್ತೇನೆ. ಈಗಾಗಲೇ ಆಸ್ತಿ ಕುರಿತು ವಿಲ್ ಮಾಡಿಸಿದ್ದು, ಈ ಬಗ್ಗೆ ಮಕ್ಕಳಿಗೂ ತಿಳಿಸಿದ್ದೇನೆ. ಕಳೆದ 15-20 ವರ್ಷದಿಂದ ನನ್ನ ಜೊತೆಗಿರುವವರಿಗೆ ಒಂದೊಂದು ನಿವೇಶನ ಕೊಡುವಂತೆ ಹೇಳಿದ್ದೇನೆ. ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಿಸಿದ್ದೇನೆ" ಎಂದು ಹೇಳಿದರು.