ಶೃಂಗೇರಿ, ಜ 21 (Daijiworld News/MB) : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ದೊರೆತಿದೆ ಎಂದು ತಿಳಿದು ಬಂದಿದ್ದು, ಶೀಘ್ರ ತನಿಖೆ ಆಗದಿದ್ದಲ್ಲಿ ಬೇರೆ ಕತೆ ಕಟ್ಟುವ ಸಾಧ್ಯತೆಯಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಸೋಮವಾರ ಶೃಂಗೇರಿಯಲ್ಲಿ ದೇವೇಗೌಡರ ನೇತೃತ್ವದಲ್ಲಿ ನಡೆಯುತ್ತಿರುವ ಸಹಸ್ರ ಚಂಡಿಕಾ ಯಾಗದಲ್ಲಿ ಪಾಲ್ಗೊಂಡು ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾಗಳು ಇರುವುದರಿಂದ ಅಲ್ಲಿ ಬಾಂಬ್ ಇಟ್ಟಿರುವುದು ಯಾರು ಎಂದು ಪತ್ತೆ ಹಚ್ಚುವುದು ಕಷ್ವವಲ್ಲ. ಈ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಈ ಪ್ರಕರಣದ ತನಿಖೆಗೆ 15, 20 ಅಥವಾ 1 ತಿಂಗಳೂ ತೆಗೆದುಕೊಂಡು ಬೇರೆಯೇ ಕಥೆ ಕಟ್ಟುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಈ ಘಟನೆಯ ವಾಸ್ತವಾಂಶವನ್ನು ಸರ್ಕಾರ ಮತ್ತು ಪೊಲೀಸರು ಜನತೆಯ ಮುಂದಿಡಬೇಕು. ಇತ್ತೀಚೆಗೆ ನಡೆದ ಪ್ರಕರಣಗಳ ಹಿನ್ನಲೆಯಲ್ಲಿ ನನಗೆ ರಾಜ್ಯ ಸರ್ಕಾರದ ಮೇಲೆ ಅನುಮಾನವಿದೆ. ಸರಕಾರ ಕೆಲವ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಸಂಘರ್ಷದ ಮನಸ್ಥಿತಿಯನ್ನು ಹುಟ್ಟುಹಾಕುತ್ತಿದೆ. ಬಾಂಬ್ ಪತ್ತೆ ಹಚ್ಚುವಲ್ಲಿ ವಿಳಂಬವಾದಲ್ಲಿ ಮತ್ತೊಂದು ಸಂಘರ್ಷ ಉಂಟಾಗಬಹುದು. ಆ ಹಿನ್ನಲೆಯಲ್ಲಿ ಸರ್ಕಾರ ಕೂಡಲೇ ಈ ಪ್ರಕರಣದ ತನಿಖೆಯನ್ನು ನಡೆಸಿ ವಾಸ್ತವಾಂಶವನ್ನು ಜನತೆಗೆ ತಿಳಿಸಬೇಕು ಎಂದರು.