ಬೆಂಗಳೂರು, ಜ 21 (Daijiworld News/MB) : ನಾನು ದುಡಿಯುವ ಸಲುವಾಗಿ ಬೆಂಗಳೂರಿಗೆ ಬಂದಿದ್ದೇನೆ ಕಡಿಮೆ ಬಾಡಿಗೆ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಜೋಪಡಿಯಲ್ಲಿ ಉಳಿದುಕೊಂಡಿದ್ದೆ. ಆದರೆ ನಾನು ಬಾಂಗ್ಲಾದೇಶದ ಪ್ರಜೆ ಎಂದು ಹೇಳಿ ನನ್ನ ಜೋಪಡಿಯನ್ನೇ ನೆಲಸಮ ಮಾಡಿದ್ದಾರೆ. ಆದರೆ ನಾನು ಕೊಪ್ಪಳದ ಕಾರ್ಮಿಕ ಎಂದು ಕೊಪ್ಪಳ ಮೂಲದ ಕಾರ್ಮಿಕ ಕಾರಣ್ಣ ಅವರು ಅಳಲು ತೋಡಿಕೊಂಡಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ಬಾಂಗ್ಲಾದೇಶದ ಪ್ರಜೆಗಳ ವಿರುದ್ಧ ಕಾರ್ಯಾಚರಣೆ ಆರಂಭ ಮಾಡಿದ್ದು ದೇವರಬಿಸನಹಳ್ಳಿಯ ಕರಿಯಮ್ಮನ ಅಗ್ರಹಾರದಲ್ಲಿದ್ದ ಸ್ಥಳೀಯ ಕಾರ್ಮಿಕರ ಜೋಪಡಿಗಳನ್ನು ಭಾನುವಾರ ಏಕಾಏಕಿ ನೆಲಸಮ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಗಳ ಒತ್ತಡದಿಂದಾಗಿ ಅನಧಿಕೃತವಾಗಿ ತೆರವುಗೊಳಿಸಲಾಗಿದೆ ಎಂಬ ಆರೋಪಗಳು ಕೂಡಾ ಕೇಳಿ ಬರುತ್ತಿದೆ.
ಜೋಪಡಿ ತೆರವು ಮಾಡುವ ಸಂದರ್ಭದಲ್ಲಿ ನಾನು ಅಧಿಕಾರಿಗಳನ್ನು ಪ್ರಶ್ನಿಸಿದ್ದು ಅವರು, "ನೀನು ಬಾಂಗ್ಲಾದವನು. ಇಲ್ಲಿ ಇರಬೇಡ. ವಾಪಸ್ ಹೋಗು" ಎಂದು ಗದರಿಸಿದ್ದಾರೆ, ನಾನು ಕೊಪ್ಪಳದವ, ಅದು ಹೇಗೆ ಬಾಂಗ್ಲಾ ದೇಶವಾಗಲು ಸಾಧ್ಯ ಎಂದು ಕೇಳಿ ಕಣ್ಣೀರಿಟ್ಟಿದ್ದಾರೆ ಕಾರ್ಮಿಕ ಕಾರಣ್ಣ.
ನಾನು ಕೊಪ್ಪಳದವ ಎನ್ನುವುದಕ್ಕೆ ದಾಖಲೆಗಳನ್ನು ತೋರಿಸಿದ್ದು ಅದನ್ನು ನೋಡುವಷ್ಟೂ ತಾಳ್ಮೆ ಅಧಿಕಾರಿಗಳಿಗೆ ಇರಲಿಲ್ಲ. ಊರಲ್ಲಿ ಕೆಲಸವಿಲ್ಲ ಎಂಬ ಕಾರಣಕ್ಕೆ ಇಲ್ಲಿ ಬಂದಿದ್ದೇನೆ. ಇನ್ನೂ ನಾನು ಏನೂ ಮಾಡುವುದು. ಎರಡು ದಿನದಿಂದ ಖುಲ್ಲಾ ಜಾಗದಲ್ಲೇ ಮಲಗಿ ಕೆಲಸಕ್ಕೆ ಹೋಗಿ ಬರುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ನಾನು ಜೋಪಡಿಯಲ್ಲಿ ಕೋಳಿ ಮಾಂಸ ಮಾರಾಟ ಮಾಡುತ್ತಿದ್ದೆ. ಈಗ ಬೀದಿಗೆ ಬಂದಿದ್ದೇನೆ ಎಂದು ಕೋಲಾರದ ಅಯೂಬ್ ಬೇಗ್ ಹೇಳಿದ್ದಾರೆ.
ಆ ಜಾಗದ ಮಾಲೀಕರಿಗೆ ತಿಂಗಳಿಗೆ 3 ಸಾವಿರ ಬಾಡಿಗೆ ಕೊಟ್ಟು ಕಾರ್ಮಿಕರು ಅಲ್ಲಿ ವಾಸವಿದ್ದು ಈ ಘಟನೆ ನಡೆದ ನಂತರ ಅವರ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಹಾಗೆಯೇ ಜೋಪಡೆಯಲ್ಲಿ ವಾಸವಿರುವ ಜನರಿಗೆ ನೀರು, ವಿದ್ಯುತ್ ಕಡಿತ ಮಾಡಲಾಗಿದೆ. ನೀರಿನ ಟ್ಯಾಂಕರ್ ಹೋಗದಂತೆ ರಸ್ತೆಗಳನ್ನು ಅಗೆಯಲಾಗಿದೆ.
ಆ ಜೋಪಡಿಗಳಲ್ಲಿ ಬಾಂಗ್ಲಾ ದೇಶದ ಪ್ರಜೆಗಳಿದ್ದು ತಿಂಗಳ ಹಿಂದೆ ಪೊಲೀಸರು ಪ್ರತಿ ಜೋಪಡಿಗೂ ಬಂದು ತಪಾಸಣೆ ಮಾಡಿದ್ದು ಅದಾದ ಮರುದಿನವೇ ಬಾಂಗ್ಲಾದವರು ಅಲ್ಲಿಂದ ಹೋಗಿದ್ದಾರೆ.
"ಮೂರೂವರೆ ವರ್ಷದಿಂದ ನಗರದಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದು, ಕಡಿಮೆ ಬಾಡಿಗೆ ಎಂಬ ಕಾರಣಕ್ಕೆ ಜೋಪಡಿಯಲ್ಲಿ ಇದ್ದೆ. ನನ್ನ ದಾಖಲೆಗಳನ್ನು ನೋಡಿ ಬೆಳ್ಳಂದೂರು ಪೊಲೀಸರೇ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಅದಕ್ಕೂ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ" ಎಂದು ಮಿಜೋರಾಂನ ಮೇಘನಾಥ್ ಚಕ್ಮಾ ತಿಳಿಸಿದ್ದಾರೆ.