ಹೈದರಾಬಾದ್, ಜ 21 (Daijiworld News/MB) : ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶ ವಿಕೇಂದ್ರೀಕರಣ ಮತ್ತು ಎಲ್ಲ ಪ್ರದೇಶಗಳ ಅಭಿವೃದ್ಧಿ ಮಸೂದೆ ಮಂಡನೆಯ ಸಂದರ್ಭದಲ್ಲಿ ಭಾಷಣ ಮಾಡಿದಾಗ ಅಡ್ಡಿ ಪಡಿಸಿದ ಹಿನ್ನಲೆಯಲ್ಲಿ ಪ್ರತಿಪಕ್ಷ ಟಿಡಿಪಿಯ 17 ಶಾಸಕರನ್ನು ಆಂಧ್ರಪ್ರದೇಶ ವಿಧಾನಸಭೆಯಿಂದ ಸೋಮವಾರ ಅಮಾನತು ಮಾಡಲಾಗಿದೆ.
ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಇತರ ಕೆಲವು ಪಕ್ಷದ ಮುಖಂಡರು ಸರ್ಕಾರ ಈ ಮಸೂದೆಯನ್ನು ಹಿಂಪಡೆಯುವವರೆಗೂ ಪ್ರತಿಭಟನೆ ನಡೆಸುವುದಾಗಿ ಹೇಳಿ ವಿಧಾನಸಭೆಯ ಹೊರಗೆ ಮೌನ ಪ್ರತಿಭಟನೆ ನಡೆಸಿದ್ದರು.
ಜಗತ್ತಿನ ಯಾವ ರಾಷ್ಟ್ರಗಳಲ್ಲೂ ಒಂದು ರಾಜ್ಯಕ್ಕೆ ಮೂರು ರಾಜಧಾನಿಯಿಲ್ಲ. ಇಂದು ಕಪ್ಪು ದಿನವಾಗಿದೆ. ನಾವು ಅಮರಾವತಿ ಹಾಗೂ ಆಂಧ್ರಪ್ರದೇಶವನ್ನು ಉಳಿಸಲು ಬಯಸಿದ್ದೇವೆ. ನಾನು ಮಾತ್ರವಲ್ಲದೇ ರಾಜ್ಯದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಎಲ್ಲರನ್ನೂ ಬಂಧನ ಮಾಡುತ್ತಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಇದು ಅಪಯಾಕಾರಿಯಾದ ಬೆಳವಣಿಗೆ ಎಂದು ನಾಯ್ಡು ಹೇಳಿದ್ದಾರೆ.
ಈ ಮಸೂದೆಯ ಪ್ರಕಾರ ಆಂಧ್ರಪ್ರದೇಶ ರಾಜ್ಯದಲ್ಲಿ ಇನ್ನು ಮುಂದೆ ಮೂರು ರಾಜಧಾನಿಗಳು ಇರಲಿದ್ದು ಅದು ಅಮರಾವತಿ, ವಿಶಾಖಪಟ್ಟಣಂ ಹಾಗೂ ಕರ್ನೂಲ್ ಎಂದು ಉಲ್ಲೇಖಿಸಲಾಗಿದೆ.
ಅಮರಾವತಿ ಶಾಸಕಾಂಗ ರಾಜಧಾನಿಯಾಗಲಿದ್ದು, ಶಾಸಕಾಂಗದ ಸ್ಥಾನ ರಾಜ ಭವನ, ಕಾರ್ಯದರ್ಶಿಗಳು ಮತ್ತು ಸರ್ಕಾರಿ ಇಲಾಖೆಗಳ ಮುಖ್ಯಸ್ಥರ ಕಚೇರಿಗಳು ವಿಶಾಖಪಟ್ಟಣಂನಲ್ಲಿ ಇರಲಿದೆ. ಕರ್ನೂಲ್ ನ್ಯಾಯಾಂಗ ರಾಜಧಾನಿಯಾಗಿರುತ್ತದೆ ಮತ್ತು ಹೈಕೋರ್ಟ್ ಅಲ್ಲಿರುತ್ತದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ.