ಬೆಂಗಳೂರು, ಜ 21 (Daijiworld News/MB) : ಆನ್ಲೈನ್ ಫುಡ್ ಡೆಲಿವರಿ ಮಾಡುವ ಕೆಲ ಕಂಪೆನಿಗಳು 30 ನಿಮಿಷದೊಳಗೆ ಪಿಜ್ಜಾ ಡೆಲಿವರಿ ಮಾಡಲಾಗುತ್ತದೆ, ಮಾಡದಿದ್ದಲ್ಲಿ ಪಿಜ್ಜಾ ಫ್ರೀ ಎಂದು ಆಫರ್ ನೀಡುತ್ತಿದ್ದು ಇದರಿಂದಾಗಿ ಪಿಜ್ಜಾ ಡೆಲಿವರಿ ಬಾಯ್ಗಳು ಪ್ರಾಣದ ಹಂಗು ತೊರೆದು ಪಿಜ್ಜಾ ಡೆಲಿವರಿ ಮಾಡುತ್ತಿದ್ದಾರೆ.
ಈ ವಿಚಾರದಲ್ಲಿ ಟ್ವೀಟ್ ಮಾಡಿರುವ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, "ಡೆಲಿವರಿ ಸಮಯವನ್ನು 40 ನಿಮಿಷಕ್ಕೆ ಏರಿಸಿ, ಡೆಲಿವರಿ ಬಾಯ್ಗಳು ಪ್ರಾಣ ಪಟ್ಟಕ್ಕಿಟ್ಟು ಒದ್ದಾಡುತ್ತಾರೆ. ಬೇಗನೇ ಡೆಲಿವರಿ ಮಾಡುವ ಆತುರದಲ್ಲಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡುತ್ತಾರೆ" ಎಂದು ಹೇಳಿದ್ದಾರೆ.
ಈ ಟ್ವೀಟ್ಗೆ ಸ್ವಿಗ್ಗಿ ಪ್ರತಿಕ್ರಿಯೆ ನೀಡಿ, "ನಿಮ್ಮ ಕಾಳಜಿ ನಮಗೆ ಅರ್ಥವಾಗುತ್ತದೆ. ನಾವು ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡುವುದಿಲ್ಲ. ಒಂದು ವೇಳೆ ನಮ್ಮ ಡೆಲಿವರಿ ಬಾಯ್ಗಳು ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ನಮ್ಮ ಸಹಾಯವಾಣಿಗೆ ದೂರು ಕೊಡಿ" ಎಂದು ರೀ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ನಿಂದಾಗಿ ಕುಪಿತಗೊಂಡ ಭಾಸ್ಕರ್ ರಾವ್ ಅವರು, "ನಿಮ್ಮ ಈ ನಿಯಮದಿಂದಾಗಿ ಡೆಲಿವರಿ ಬಾಯ್ಗಳು ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿ ಪೊಲೀಸರ ಕೈ ಕಾಲು ಹಿಡಿದು ನಮ್ಮನ್ನು ಹೋಗಲು ಬಿಡಿ ಸರ್ ಇಲ್ಲದಿದ್ದಲ್ಲಿ ನಮಗೆ ತೊಂದರೆಯಾಗುತ್ತದೆ ಎಂದು ಬೇಡಿಕೊಳ್ಳುತ್ತಾರೆ. ನಿಮ್ಮ ಡೆಲಿವರಿ ಬಾಯ್ಗಳಿಗೆ ಅಪಘಾತವಾದಲ್ಲಿ ನಿಮ್ಮ ಕಂಪೆನಿಯ ಮ್ಯಾನೇಜ್ಮೆಂಟ್ ಕಂಬಿಯ ಹಿಂದೆ ಇರಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.