ನವದೆಹಲಿ, ಜ 21 (Daijiworld News/MB) : ಈ ವರ್ಷದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸೊನಾರೊ ಜನವರಿ 24ರಂದು ಭಾರತಕ್ಕೆ ಆಗಮಿಸಲಿದ್ದಾರೆ.
ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮೊದಲ ಭಾರತ ಭೇಟಿಯಾಗಿದ್ದು ಶುಕ್ರವಾರದಿಂದ ನಾಲ್ಕು ದಿನಗಳ ದೇಶ ಪ್ರವಾಸ ಪ್ರಾರಂಭವಾಗಲಿದೆ. ಹಾಗೆಯೇ ಅವರೊಂದಿಗೆ 7 ಮಂತ್ರಿಗಳು ಉನ್ನತ ಅಧಿಕಾರಿಗಳು ಮತ್ತು ದೊಡ್ಡ ವಾಣಿಜ್ಯ ನಿಯೋಗವೂ ಆಗಮಿಸಲಿದೆ.
ಭಾರತದ ಗಣರಾಜೋತ್ಸವ ದಿನಕ್ಕೆ ಅನ್ಯರಾಷ್ಟ್ರಗಳ ನಾಯಕರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನ ಮಾಡುವುದು ಒಂದು ವಾಡಿಕೆಯಾಗಿದ್ದು ಅದರಂತೆ ಜನವರಿ 26ರಂದು ನವದೆಹಲಿಯಲ್ಲಿ ನಡೆಯಲಿರುವ 71ನೇ ಗಣರಾಜ್ಯೋತ್ಸದ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಪಾಲ್ಗೊಳ್ಳಲಿದ್ದಾರೆ.
ಬ್ರೆಜಿಲ್ನ ಮಾಜಿ ಅಧ್ಯಕ್ಷರಾದ ಫರ್ನಾಂಡೊ ಹೆನ್ರಿಕ್ ಕಾರ್ಡೋಸೊ ಅವರು 1996ರಲ್ಲಿ ಹಾಗೂ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು 2004ರಲ್ಲಿ ಭಾರತಕ್ಕೆ ಆಗಮಿಸಿದ್ದರು. ಈಗ ಬ್ರೆಜಲ್ನಿಂದ ಭಾರತಕ್ಕೆ ಭೇಟಿ ನೀಡಿದ ಅಧ್ಯಕ್ಷರ ಪೈಕಿ ಇವರು ಮೂರನೇಯವರಾಗಲಿದ್ದಾರೆ.
ಭಾರತ ಮತ್ತು ಬ್ರೆಜಿಲ್ ಉತ್ತಮ ಸಂಬಂಧವನ್ನು ಹೊಂದಿದ್ದು ಬ್ರಿಕ್ಸ್, ಬಿಎಎಸ್ಐಸಿ, ಜಿ -20, ಜಿ -4, ಐಬಿಎಸ್ಎ, ಅಂತರರಾಷ್ಟ್ರೀಯ ಸೌರ ಒಕ್ಕೂಟ ಮತ್ತು ಬಯೋಫ್ಯೂಚರ್ಗಳಂತಹ ಅನೇಕ ವೇದಿಕೆಗಳಲ್ಲಿ ಸದಸ್ಯ ರಾಷ್ಟ್ರಗಳಾಗಿವೆ.