ನವದೆಹಲಿ, ಜ 22 (Daijiworld News/MB) : ಸುಪ್ರೀಂ ಕೋರ್ಟ್ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಸಲ್ಲಿಸಿರುವ 144 ಅರ್ಜಿಗಳ ವಿಚಾರಣೆಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಮೂರು ನ್ಯಾಯಾಧೀಶರ ಪೀಠವು ಕೈಗೆತ್ತಿಕೊಳ್ಳಲಿದೆ.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮತ್ತು ಕಾಂಗ್ರೆಸ್ ನಾಯಕ ಜೈರಾಮ್ ಸಲ್ಲಿಸಿದ್ದ ಅರ್ಜಿಗಳು ಸೇರಿದಂತೆ 144 ಅರ್ಜಿಗಳು ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗಿದ್ದು ನ್ಯಾಯಮೂರ್ತಿಗಳಾದ ಎಸ್ಎ ಬೊಬ್ಡೆ, ಎಸ್ ಅಬ್ದುಲ್ ನಜೀರ್ ಹಾಗೂ ಸಂಜೀವ್ ಖನ್ನಾ ಈ ಅರ್ಜಿ ವಿಚಾರಣೆ ನಡೆಸಲಿದ್ದಾರೆ.
ಕಾಂಗ್ರೆಸ್, ಡಿಎಂಕೆ, ಸಿಪಿಐ, ಸಿಪಿಎಂ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಥವಾ ಐಯುಎಂಎಲ್, ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂ ಮತ್ತು ಕಮಲ್ ಹಾಸನ್ ಅವರ ಮಕ್ಕಲ್ ನೀಧಿ ಮಯ್ಯಮ್ ಹೀಗೆ ಹಲವು ರಾಜಕೀಯ ಪಕ್ಷಗಳು ಹಾಗೂ ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದಾರೆ.
ಸಂವಿಧಾನದ ಮೂಲ ರಚನೆಗೆ ಕೇಂದ್ರ ಸರ್ಕಾರದ ಸಿಎಎ ವಿರುದ್ಧವಾಗಿದ್ದು ಮುಸ್ಲಿಮರ ವಿರುದ್ಧ ತಾರತಮ್ಯ ಮಾಡುವ ಉದ್ದೇಶ ಸ್ಪಷ್ಟವಾಗಿ ಹೊಂದಿದೆ. ಈ ಕಾಯಿದೆಯು ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಮಾತ್ರ ಹೆಚ್ಚಿನ ಮಹತ್ವ ನೀಡಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.