ಬೆಂಗಳೂರು, ಜ 22 (Daijiworld News/MB) : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಹಿನ್ನಲೆಯಲ್ಲಿ ಮಂಗಳೂರಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಮಂಗಳೂರಿನಲ್ಲಿ ಬಾಂಬ್ ಪತ್ತೆ ಪ್ರಕರಣ ಒಂದು ಅಣುಕು ಪ್ರದರ್ಶನ ಎಂದು ಹೇಳಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, "ಕುಮಾರಸ್ವಾಮಿ ಅವರು ಪೊಲೀಸರನ್ನು ಅನುಮಾನಿಸಿ ದೇಶದ್ರೋಹಿ ಹೇಳಿಕೆ ನೀಡಿದ್ದಾರೆ, ಅವರು ಈ ಕೂಡಲೇ ಕ್ಷಮೆಕೋರಬೇಕು" ಎಂದು ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, "ಇಂದಿನ ಬೆಳವಣಿಗೆ ಏನು ಬ್ರದರ್, ಮಂಗಳೂರು ಕಮಿಷನರ್ ಹರ್ಷ ಅವರು ಇವತ್ತೆಲ್ಲಾದ್ರೂ ಬಾಂಬ್ ಹಾಕಿಸಿದ್ರ" ಎಂದೂ ಪ್ರಶ್ನಿಸಿದ್ದಾರೆ.
"ನಾವು ನಮ್ಮ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆಗೆ ಪಾಕಿಸ್ತಾನ ಕಾರಣ ಎಂದು ದೂರುತ್ತಲ್ಲೇ ಬಂದಿದ್ದೇವೆ. ವಿಶ್ವಸಂಸ್ಥೆ ಸೇರಿದಂತೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. ಹೀಗಿರುವಾಗ ಜವಾಬ್ದಾರಯುತ ಸ್ಥಾನದಲ್ಲಿರುವವರು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಒಂದು ವೇಳೆ ಪೊಲೀಸರೇ ಬಾಂಬ್ ಇರಿಸಿದ್ದಾರೆ ಎಂದು ಕುಮಾರಸ್ವಾಮಿ ಅವರಿಗೆ ತಿಳಿದಿದ್ದಾರೆ ಪ್ರಕರಣ ದಾಖಲು ಮಾಡಿಸಲಿ" ಎಂದು ಜೋಶಿ ಅವರು ಸವಾಲು ಹಾಕಿದ್ದಾರೆ.
'ಮಂಗಳೂರಿನಲ್ಲಿ ಪದೇಪದೇ ದುರ್ಘಟನೆಗಳು ನಡೆಯುತ್ತಿದ್ದು, ಗುಪ್ತದಳದ ಅಧಿಕಾರಿಗಳು ಏನು ಮಾಡುತ್ತಿದ್ದಾರೋ ತಿಳಿದಿಲ್ಲ. ರಾಜ್ಯ ಸರ್ಕಾರ ಇಂತಹ ಘಟನೆಗಳನ್ನು ತಡೆಗಟ್ಟಲು ಸಂಪೂರ್ಣವಾಗಿ ವಿಫಲವಾಗಿದೆ' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿದ್ದಾರೆ.