ರಾಜಸ್ಥಾನ, ಜ 22 (Daijiworld News/MSP): ರಾಜಸ್ಥಾನದ ಕಾಂಗ್ರೆಸ್ ಕಾರ್ಯಕರ್ತನೊಬ್ಬ ತನ್ನ ಮಗುವಿಗೆ 'ಕಾಂಗ್ರೆಸ್ ಜೈನ್' ಎಂದು ಹೆಸರಿಡುವ ಮೂಲಕ ಭಾರೀ ಸುದ್ದಿಯಾಗಿದ್ದಾನೆ.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಉದಯಪುರದ ಕಚೇರಿಯಲ್ಲಿ ಮಾಧ್ಯಮ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿನೋದ್ ಜೈನ್ ಅವರು ತಮ್ಮ ನವಜಾತ ಮಗನಿಗೆ ಈ ರೀತಿ ಹೆಸರಿಟ್ಟು ಸುದ್ದಿಯಾಗಿದ್ದಾರೆ.
ಈ ಕುರಿತು ಮಾತನಾಡಿರುವ ವಿನೋದ್ ಜೈನ್, ನಮ್ಮ ಕುಟುಂಬ ಅನಾದಿಕಾಲದಿಂದಲೂ ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಮುಂದಿನ ಪೀಳಿಗೆಯು ನಮ್ಮ ಹೆಜ್ಜೆಗಳನ್ನು ಅನುಸರಿಸಬೇಕೆಂದು ನಾವು ಬಯಸುತ್ತೇವೆ. ನನ್ನ ಮಗು ಕಳೆದ ಜುಲೈ ತಿಂಗಳಲ್ಲಿ ಜನಿಸಿದೆ. ನಂತರ ನಾನೇ ಆತನಿಗೆ ಕಾಂಗ್ರೆಸ್ ಜೈನ್ ಎಂದು ನಾಮಕರಣ ಮಾಡಿದೆ. ನನ್ನ ಕುಟುಂಬದ ಕೆಲವು ಸದಸ್ಯರು ಮಗುವನ್ನು ಕಾಂಗ್ರೆಸ್ ಎಂದು ಕರೆಯಲು ಹಿಂಜರಿಯುತ್ತಿದ್ದರು, ಆದರೆ ನಾನು ದೃಢ ನಿಶ್ಚಯದಿಂದ ಇದೇ ಹೆಸರು ನನ್ನ ಮಗುವಿಗೆ ಇರಿಸಿದ್ದೇನೆ. ಇದೀಗ ರಾಜ್ಯ ಸರ್ಕಾರದಿಂದ ಜನನ ಪ್ರಮಾಣ ಪತ್ರ ಸಿಕ್ಕಿದ್ದು, ನನ್ನ ಮಗನ ಹೆಸರು ಇಂದಿನಿಂದ ಕಾಂಗ್ರೆಸ್ ಜೈನ್ ಆಗಿದೆ ಎಂದರು.