ನವದೆಹಲಿ, ಜ 22 (Daijiworld News/MB) :ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಬುಧವಾರ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಈ ಸಂಬಂಧ ನಾಲ್ಕು ವಾರದಲ್ಲಿ ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.
ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಪೌರತ್ವ ಕಾನೂನಿನ ಕುರಿತು ಸಲ್ಲಿಕೆಯಾಗಿರುವ ಸುಮಾರು 140 ಅರ್ಜಿಗಳಿಗೆ ಮಧ್ಯಂತರ ಆದೇಶ ನೀಡಲಿದ್ದು ಈ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಕೇಳದೆಯೇ ಪೌರತ್ವ ಕಾನೂನಿಗೆ ಯಾವುದೇ ತಡೆಯನ್ನು ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ
ಈಗ ಸಲ್ಲಿಕೆಯಾಗಿರುವ ಅರ್ಜಿಗಳು ಬಗೆಹರಿಯದೆ ಸಿಎಎ ಮೇಲಿನ ಅರ್ಜಿಗಳ ವಿಚಾರಣೆ ನಡೆಸದಂತೆ ಎಲ್ಲಾ ಹೈಕೋರ್ಟ್ಗಳಿಗೂ ಕೋರ್ಟ್ ನಿರ್ಬಂಧ ಹೇರಿದೆ.
ಅಸ್ಸಾಂ ಮತ್ತು ತ್ರಿಪುರಗಳಲ್ಲಿ ಸಿಎಎ ಸಮಸ್ಯೆ ದೇಶದ ಇತರ ಭಾಗಗಳಿಗಿಂತ ಭಿನ್ನವಾಗಿರುವುದರಿಂದ ಈ ಎರಡು ರಾಜ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳಲಾಗುವುದು ಎಂದು ಮೂವರು ನ್ಯಾಯಾಧೀಶರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, "ಸಲ್ಲಿಕೆಯಾಗಿದ್ದ 143 ಅರ್ಜಿಗಳಲ್ಲಿ ಸುಮಾರು 60 ಅರ್ಜಿಗಳ ಪ್ರತಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಇನ್ನುಳಿದ ಅರ್ಜಿಗಳಿಗೆ ಪ್ರತಿಕ್ರಿಯಿಸಲು ಸಮಯ ಬೇಕು" ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸಿಎಎಯನ್ನು ತಡೆಹಿಡಿಯಬೇಕು ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು (ಎನ್ಪಿಆರ್) ಸದ್ಯದ ಮಟ್ಟಿಗೆ ಮುಂದೂಡಬೇಕು ಎಂದು ನ್ಯಾಯಪೀಠವನ್ನು ಒತ್ತಾಯಿಸಿದ್ದರು.
ಅರ್ಜಿಗಳ ವಿಚಾರಣೆಯು ಯಾರೊಬ್ಬರಿಗೂ ಪ್ರವೇಶವಿಲ್ಲದ ಕೋಣೆಯಲ್ಲಿ ನಡೆಸಲಾಗಿದ್ದು ಅಲ್ಲಿಗೆ ಬೇರೆ ವಕೀಲರ ಪ್ರವೇಶಕ್ಕೂ ಅವಕಾಶವಿರಲಿಲ್ಲ.
ಹಾಗೆಯೇ ಬೊಬ್ಡೆ ಅವರು 'ಪೌರತ್ವ ಕಾನೂನು ವಿಷಯವು ಅತ್ಯುನ್ನತವಾಗಿದ್ದು, ಎಲ್ಲರ ಮನಸ್ಸಿನಲ್ಲಿಯೂ ಇದೆ. ಈ ವಿಚಾರಣೆ ವೇಳೆ ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಹೀಗೆ ಕೋಣೆಗಳಲ್ಲಿ ವಿಚಾರಣೆ ನಡೆಸಬೇಕಾಗಿದೆ. ಕೆಲವು ಸಣ್ಣ ವಿಷಯಗಳನ್ನು ನಾವು ಕೋಣೆಗಳಲ್ಲಿ ವಿಚಾರಿಸಬಹುದು ಮತ್ತು ವಕೀಲರು ಕೂಡ ಈ ಕೋಣೆಗಳಿಗೆ ಬರಬಹುದು' ಎಂದು ಅವರು ಹೇಳಿದರು.
ಸದ್ಯ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದ್ದು, ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಆದೇಶಿಸಿದೆ.