ಹಾಸನ, ಜ.22 (Daijiworld News/PY) : "ರಾಜ್ಯದಲ್ಲಿ ಭಯೋತ್ಪಾದಕರನ್ನು ಮಟ್ಟಹಾಕುವ ಸಲುವಾಗಿ ಕಾಂಗ್ರೆಸ್, ಜೆಡಿಎಸ್ ಬಿಜೆಪಿ ಎನ್ನದೇ ಇಡೀ ರಾಜ್ಯವೇ ಕೈಜೋಡಿಸಬೇಕಿದೆ" ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ದುಷ್ಟ ಶಕ್ತಿಗಳು ಪೌರತ್ವ ಕಾಯ್ದೆಯನ್ನು ದುರುಪಯೋಗ ಮಾಡಿಕೊಂಡು ಗದ್ದಲ ಮಾಡಲು ಪ್ರಯತ್ನಿಸುತ್ತಿವೆ. ಎಲ್ಲರೂ ಒಂದಾಗದಿದ್ದರೆ ದುಷ್ಟಶಕ್ತಿಗಳನ್ನು ತಡೆಯಲು ಸಾಧ್ಯವಿಲ್ಲ. ಪೊಲೀಸರು ತಮ್ಮ ಪ್ರಾಣವನ್ನು ಲೆಕ್ಕಿಸದೇ ದುಷ್ಕೃತ್ಯಗಳನ್ನು ತಡೆಯುತ್ತಿದ್ದಾರೆ. ಈ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಎಲ್ಲರೂ ಒಂದಾಗಿ ದುಷ್ಟರನ್ನು ಮಟ್ಟಹಾಕಲು ಯತ್ನಿಸಬೇಕು, ಹಿಂದೂ, ಮುಸ್ಲಿಂ ಹೆಸರಿನಲ್ಲಿ ಕಿಡಿಗೇಡಿಗಳಿಗೆ ಗದ್ದಲ ಪ್ರಾರಂಭಿಸಲು ಬಿಡಬಾರದು" ಎಂದರು.
ಅಮಿತ್ ಶಾ ಅವರ ವಿರುದ್ದ ಸಿದ್ದರಾಮಯ್ಯ ಅವರು ಟೀಕೆ ಮಾಡಿದ ವಿಚಾರವಾಗಿ ಮಾತನಾಡಿದ ಅವರು, "ಮೊದಲು ಸಿದ್ದರಾಮಯ್ಯ ಅವರು ಪಕ್ಷದ ಅಧ್ಯಕ್ಷರನ್ನು ನೇಮಿಸಿಕೊಳ್ಳಲಿ, ಅವರ ಪಕ್ಷಕ್ಕೆ ಅಧ್ಯಕ್ಷರನ್ನು ಹುಡುಕಿಕೊಳ್ಳಲು ಆಗದೇ ಇದ್ದವರು, ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಎಲ್ಲಿದೆ, ಕಾಂಗ್ರೆಸ್ ಛಿದ್ರವಾಗಿದೆ. ಈಗಾಗಲೇ ಕಾಂಗ್ರೆಸ್ನಲ್ಲಿ 3 ಗುಂಪುಗಳಾಗಿವೆ. ಸಿದ್ದರಾಮಯ್ಯ ಅವರಿಗೆ ಕೆಲಸ ಇಲ್ಲದ ಕಾರಣ ಹೀಗೆ ಮಾತನಾಡುತ್ತಿದ್ದಾರೆ. ಹಗಲುಗನಸು ಕಾಣುತ್ತಿದ್ದಾರೆ. ನಾನು ಇದ್ದೇನೆ ಎನ್ನುವ ಸಲುವಾಗಿ ಸಿದ್ದರಾಮಯ್ಯ ಅವರು ಹೀಗೆ ಮಾತನಾಡುತ್ತಿದ್ದಾರೆ. ಮೊದಲು 3 ಗುಂಪುಗಳಾಗಿರುವುದನ್ನು ಸರಿಪಡಿಸಿಕೊಳ್ಳಲಿ, ನಂತರ ಅಮಿತ್ ಶಾ ಬಗ್ಗೆ ಮಾತನಾಡಲಿ" ಎಂದು ಹೇಳಿದರು.