ಬೆಂಗಳೂರು, ಜ 22 (Daijiworld News/MSP): ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡುವುದರ ಮೂಲಕ ಬಿಜೆಪಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
"ಸಮಾಜ ವಿರೋಧಿ ಕಾರಣಕ್ಕೆ ಭಾರತಾಂಬೆ ಮಡಿಲಲ್ಲಿ ಬಾಂಬ್ ಇಡುವವರು ದೇಶದ್ರೋಹಿಗಳೇ. ಚಿಕ್ಕಮಗಳೂರಿನ ಸಾಹಿತ್ಯ ಸಮ್ಮೇಳನಕ್ಕೆ ಪೆಟ್ರೋಲ್ ಬಾಂಬ್ ಹಾಕುತ್ತೇನೆ ಎಂದಿದ್ದ ನಿಮ್ಮದೇ ಸಿದ್ಧಾಂತ ಪ್ರತಿಪಾದಕರೂ ದೇಶದ್ರೋಹಿಗಳೇ ಅಲ್ಲವೇ ಬಿಜೆಪಿ ನಾಯಕರೇ?" ಎಂದು ಟ್ವೀಟ್ ಮೂಲಕ ಬಿಜೆಪಿ ನಾಯಕರನ್ನು ತಿವಿದಿದ್ದಾರೆ.
ಇನ್ನು ಮಂಗಳವಾರ ಶಿಕ್ಷಣ ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿ, ಚಕ್ರವರ್ತಿ ಸೂಲಿಬೆಲೆ ನಂಬರ್ ಒನ್ ದೇಶಭಕ್ತ ಎಂದು ಹೇಳಿದ್ದರು. ಇದಕ್ಕೆ ಟಾಂಗ್ ನೀಡಿರುವ ಕುಮಾರಸ್ವಾಮಿ "ದೇಶಪ್ರೇಮಕ್ಕೆ ರ್ಯಾಂಕ್ ಕೊಡುತ್ತಾರೆ ಸುರೇಶ್ ಕುಮಾರ್. ತಾಯಿ ಮೇಲಿನ ಪ್ರೀತಿಗೆ ರ್ಯಾಂಕ್ ನೀಡಲು ಸಾಧ್ಯವೇ? ರಾಜಕೀಯಕ್ಕೆ ದೇಶಪ್ರೇಮವನ್ನು ಬಳಸಿಕೊಂಡ ನಿಮ್ಮ ಬೌದ್ಧಿಕ ದಿವಾಳಿತನ ನಿಜಕ್ಕೂ ನನ್ನಲ್ಲಿ ಬೇಸರ ತರಿಸಿದೆ. ಸಜ್ಜನರಾದ ನಿಮ್ಮ ಮೇಲಿನ ನನ್ನ ಅಭಿಮಾನಕ್ಕೇ ಕುಂದುಂಟಾಗಿದೆ... ದೇಶಪ್ರೇಮದ ವಿಚಾರದಲ್ಲಿ ರ್ಯಾಂಕ್ಕೊಟ್ಟರೆ 'ಆತ' ಕೊನೇ ರ್ಯಾಂಕ್ ಎಂದಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ " ನನ್ನನ್ನು ದೇಶದ್ರೋಹಿ, ಪಾಕಿಸ್ತಾನ ಪರ ವಾದಿ ಎಂದು ಕೂಗು ಮಾರಿಯಂತೆ ಅರಚುತ್ತಿರುವ ಪ್ರಹ್ಲಾದ್ ಜೋಶಿ ಅವರೇ, ದಿನ ಬೆಳಗಾದರೆ ಪಾಕಿಸ್ತಾನವನ್ನೇ ಜಪಿಸುವ ನಿಮ್ಮ ಮೂಲ ಪಾಕ್ ಇರಬಹುದೇನೋ ನನಗೆ ಗೊತ್ತಿಲ್ಲ. ಪಾಕಿಸ್ತಾನದ ನೆಲ ಸ್ಪರ್ಶಿಸಿ, ಬಿರಿಯಾನಿ ತಿಂದು ಬಂದ ಪ್ರಧಾನಿಯ ಮಂತ್ರಿಮಂಡಲದಲ್ಲಿರುವ ನೀವು ದೇಶಭ್ರಷ್ಟರು. ನಾನು ಈ ಮಣ್ಣಿನವ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.