ಕಲಬುರ್ಗಿ, ಜ.22 (Daijiworld News/PY) : "2025ಕ್ಕೆ ಬಿಜೆಪಿ ಮಾತೃ ಸಂಸ್ಥೆಗೆ 100 ವರ್ಷಗಳು ತುಂಬಲಿವೆ. ಆ ವೇಳೆ ಭಾರತವನ್ನು ಹಿಂದೂ ರಾಷ್ಟ ಮಾಡುವ ಸಲುವಾಗಿ ಬಿಜೆಪಿ ಸಿಎಎ, ಎನ್ಆರ್ಸಿ, ಎನ್ಪಿಆರ್ ಜಾರಿಗೊಳಿಸಲಾಗುತ್ತಿದೆ" ಎಂದು ಸಿಪಿಎಂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡುತ್ತಿಲ್ಲ ದೇಶದ ಆರ್ಥಿಕ ವ್ಯವಸ್ಥೆ ಹಾಳಾಗಿದೆ. ಕೇಂದ್ರ ಸರ್ಕಾರದ ಪ್ರಕಾರ 4.8 ಜಿಡಿಪಿ ಇದೆ. ಆದರೆ ಅಂತರಾಷ್ಟ್ರೀಯ ಸಂಸ್ಥೆಗಳ ಪ್ರಕಾರ ಭಾರತದ ಆರ್ಥಿಕ ವ್ಯವಸ್ಥೆ ಕುಸಿತ ಕಂಡಿದ್ದು, ಶೇ 2.8ರಷ್ಟಿದೆ" ಎಂದು ಹೇಳಿದರು.
"ಅಟೋಮೊಬೈಲ್ ಹಾಗೂ ಜವಳಿ ಉದ್ಯಮ ಕ್ಷೇತ್ರದಲ್ಲಿ 30 ಲಕ್ಷ ಉದ್ಯೋಗಗಳು ಕಡಿತಗೊಂಡಿವೆ. ಈ ಸರ್ಕಾರದ ಆಡಳಿತದಲ್ಲಿ ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಶ್ರೀಮಂತರು ಶ್ರೀಮಂತರಾಗಿಯೇ ಬೆಳೆಯುತ್ತಿದ್ದಾರೆ. ಅಮಿತ್ ಶಾ ಅವರು ಬ್ರಿಟಿಷರಂತೆ ಆಡಳಿತ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪುನಃ ತೆಗೆದುಕೊಳ್ಳುವುದಿಲ್ಲ ಎಂಬುದಾಗಿ ಹೇಳುತ್ತಾರೆ" ಎಂದು ಹೇಳಿದರು.
"ಎನ್ಆರ್ಸಿ, ಎನ್ಪಿಆರ್ ಬಗ್ಗೆ ಸಾರ್ವಜನಿಕರ ಮನೆ ಮನೆಗೆ ಸರ್ಕಾರದವರು ಬಂದು ಯಾವುದೇ ದಾಖಲೆಗಳನ್ನು ಕೇಳಿದರೆ ಕೊಡಬೇಡಿ ಎಂದು ಹೇಳಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರದ ವಿರುದ್ದ ದೇಶದಾತ್ಯಂತ ಅಸಹಕಾರ ಚಳವಳಿ ಮಾಡಲಾಗಿದೆ" ಎಂದರು.
"ಜ.23 ರಂದು ನೇತಾಜಿ ಸುಭಾಷ್ ಚಂದ್ರಬೋಸರ ಜನ್ಮದಿನದಂದು ಆರಂಭ ಮಾಡಿ, ಜ.26 ನೇ ದಿನವನ್ನು ಸಂವಿಧಾನ ಶಪಥ ದಿನವಾಗಿ ಆಚರಿಸಲಾಗುತ್ತದೆ ಹಾಗೂ ಹುತಾತ್ಮ ದಿನದಂದು ಗಾಂಧಿಯವರನ್ನು ಕೊಂದವರ ವಿರುದ್ದ ಪ್ರತಿಭಟನೆ ಮಾಡಲಾಗುವುದು" ಎಂದು ಹೇಳಿದರು.