ಚಿಕ್ಕಬಳ್ಳಾಪುರ, ಜ 22 (Daijiworld News/MB) : ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಇಂದು ಪೊಲೀಸರಿಗೆ ಶರಣಾಗಿರುವ ಆದಿತ್ಯ ರಾವ್ ಒಬ್ಬ ಭಯೋತ್ಪಾದಕ, ಆತನ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಬುಧವಾರ ಅರ್ಚಕರ ಹಾಗೂ ಆಗಮಿಕರ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆರೋಪಿಯೇ ಪೊಲೀಸರಿಗೆ ಶರಣಾಗಿದ್ದಾನೆ. ಸರ್ಕಾರ ಆತನ ವಿರುದ್ಧ ಕ್ರಮ ತೆಗೆದುಕೊಳ್ಳುವಾಗ ಜಾತಿ ಧರ್ಮ ನೋಡುವುದಿಲ್ಲ. ಆತ ಒಬ್ಬ ಭಯೋತ್ಪಾದಕ ಎಂದು ಹೇಳಿದ್ದಾರೆ.
ಪೊಲೀಸರು ವಿಮಾನ ನಿಲ್ದಾಣದಲ್ಲಿ ಇರಿಸಿದ್ದ ಬಾಂಬನ್ನು ಚಾಣಕ್ಷತನದಿಂದ ಭೇದಿಸಿ ನಿಷ್ಕ್ರಿಯಗೊಳಿಸಿದ್ದಾರೆ. ಇಲ್ಲದಿದ್ದಲ್ಲಿ ದೊಡ್ಡ ಅನಾಹುತವೇ ಆಗಿ ಹೋಗುತ್ತಿತ್ತು ಎಂದರು.
ಮಂಗಳೂರಿನಲ್ಲಿ ನಡೆಯುತ್ತಿರುವ ಹಲವು ಕೃತ್ಯಗಳಲ್ಲಿ ಹೊರ ರಾಜ್ಯದ ಕೈವಾಡವಿರುವ ಶಂಕೆಯಿದ್ದು ಆ ದೃಷ್ಟಿಕೋನದಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮಾಜಿ ಕುಮಾರಸ್ವಾಮಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿರುವ ಬಾಂಬ್ ಪ್ರಕರಣ ಒಂದು ಅಣಕು ಪ್ರದರ್ಶನ ಎಂದು ಟೀಕೆ ಮಾಡಿರುವುದರ ವಿರುದ್ಧ ಕಿಡಿಕಾರಿದ ಅವರು, "ಬಾಂಬ್ ಇಟ್ಟವರನ್ನು ಮುದ್ಧರ ಸಾಲಿಗೆ ಹೋಲಿಕೆ ಮಾಡುವುದು ಸರಿಯಲ್ಲ. ರಾಜ್ಯ ಸರ್ಕಾರ ಬದಲಾಗಿರಬಹುದು ಆದರೆ ಆಡಳಿತ ವರ್ಗ ಬದಲಾಗಿಲ್ಲ. ಇಂತಹ ಕೃತ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣನೆ ಮಾಡಲಿದೆ. ಇಂತಹ ಪ್ರಕರಣಗಳಿಗೆ ಸಂಬಂಧಿಸಿ ವಿರೋಧ ಪಕ್ಷಗಳು ರಚಾನಾತ್ಮಕವಾಗಿ ಟೀಕೆ ಮಾಡಬೇಕು. ಅದು ಬಿಟ್ಟು ಈ ರೀತಿ ಪೊಲೀಸರನ್ನು ಹಾಗೂ ಈ ಗಂಭೀರ ಪ್ರಕರಣವನ್ನು ಅಪಹಾಸ್ಯ ಮಾಡಬಾರದು ಎಂದು ಹೇಳಿದ್ದಾರೆ.