ಹೊಸದಿಲ್ಲಿ , ಜ.22 (Daijiworld News/PY) : ಅಕ್ರಮ ಬಂಧನ ಆರೋಪ ಕೇಳಿಬರುತ್ತಿದ್ದಂತೆ ಪರಾರಿಯಾದ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಅವರನ್ನು ಪತ್ತೆ ಹಚ್ಚಲು ಇಂಟರ್ ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ.
ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ನಿತ್ಯಾನಂದನ ಅಹ್ಮದಾಬಾದ್ ಆಶ್ರಮದಿಂದ ಇಬ್ಬರು ಬಾಲಕಿಯರ ಅಕ್ರಮ ಬಂಧನ ಮಾಡಿ ಅವರನ್ನು ಆಶ್ರಮಕ್ಕೆ ದೇಣಿಗೆ ಸಂಗ್ರಹಿಸಲು ಬಳಸಿಕೊಂಡ ಆರೋಪದ ಮೇಲೆ ನಿತ್ಯಾನಂದನ ವಿರುದ್ಧ ಗುಜರಾತ್ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಈ ವಿಚಾರವಾಗಿ ನಿತ್ಯಾನಂದ ಅವರಿಗೆ ನೋಟೀಸ್ ಜಾರಿ ಮಾಡುವಂತೆ ಮನವಿ ಮಾಡಲಾಗಿತ್ತು.
ಗುಜರಾತ್ ಪೊಲೀಸರ ಮನವಿಯಂತೆ ಈಗ ನಿತ್ಯಾನಂದ ಅವರಿಗೆ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ.ಯಾವುದೇ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಲು ಹಾಗೂ ಮಾಹಿತಿ ಸಂಗ್ರಹಿಸಲು ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗುತ್ತದೆಯಾದರೂ ಆರೋಪಿಯ ಬಂಧನಕ್ಕಾಗಿ ರೆಡ್ ಕಾರ್ನರ್ ನೋಟೀಸ್ ಜಾರಿಗೊಳಿಸಲಾಗುತ್ತದೆ.