ನವದೆಹಲಿ, ಜ.22 (Daijiworld News/PY) : "ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರೇ, ನಿಮ್ಮ ಕುಟುಂಬದ ಕ್ಷೇಮಾಭಿವೃದ್ಧಿಯ ಬಗ್ಗೆ ಯೋಚಿಸಿ ಈ ಬಾರಿ ನಮಗೆ ಮತ ಹಾಕಿ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಬದ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿ ಅಜೇಶ್ ಯಾದವ್ ಪರನಡೆದ ರೋಡ್ಶೋವನ್ನು ಉದ್ದೇಶಿಸಿ ಮಾತನಾಡಿದ ಅವರು, "ಆರೋಗ್ಯ ಸೇವೆ, ಶಿಕ್ಷಣ ಕ್ಷೇತ್ರದ ಏಳಿಗೆಗಾಗಿ ನಾವು ಸಾಕಷ್ಟು ಪರಿಶ್ರಮ ಹಾಕಿದ್ದೇವೆ. ಬೇರೆ ಪಕ್ಷಕ್ಕೆ ನೀವು ಮತ ಹಾಕಿದರೆ ಶಿಕ್ಷಣ ಹಾಗೂ ಆರೋಗ್ಯ ಸೇವೆ ಕೆಡಲಿದೆ. ಕಳೆದ 5 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಕೈಗೆತ್ತಿಕೊಂಡಿದ್ದು, ಕಳೆದ 70 ವರ್ಷದಿಂದ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಸಮಯಾವಕಾಶ ಬೇಕಾಗಿದೆ. ಕುಟುಂಬವೊಂದರ ಹಿರಿಯ ಮಗನಂತೆ ನಾನು ಕಾರ್ಯನಿರ್ವಹಿಸಿದ್ದೇನೆ" ಎಂದು ಹೇಳಿದರು.
2015ರಲ್ಲೂ ಚುನಾವಣಾ ಪ್ರಚಾರಕ್ಕೆ ಆಟೋವನ್ನೇ ಹೆಚ್ಚಾಗಿ ಬಳಸಲಾಗಿದ್ದು, ರೋಡ್ಶೋನಲ್ಲಿ ಕೇಜ್ರಿವಾಲ್ ಜೀಪಿನ ಹಿಂದೆ ಆಮ್ ಆದ್ಮಿ ಪಕ್ಷದ ಭಿತ್ತಿಚಿತ್ರಗಳಿದ್ದ ನೂರಾರು ಆಟೋಗಳಿದ್ದವು. ಆಟೋರಿಕ್ಷಾ ಚಾಲಕರೇ ಎಎಪಿಯ ಪ್ರಮುಖ ಮತದಾರರಾಗಿದ್ದಾರೆ.
ಫೆ.8ರಂದು ನಡೆಯಲಿರುವ ಚುನಾವಣೆಗೆ 70 ವಿಧಾನಸಭಾ ಕ್ಷೇತ್ರದಿಂದ 1,029 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಅಭ್ಯರ್ಥಿಗಳ ಪೈಕಿ 187 ಮಹಿಳೆಯರಿದ್ದು, ಶುಕ್ರವಾರ ನಾಮಪತ್ರ ಪುನಃ ಪಡೆಯಲು ಕೊನೆ ದಿನವಾಗಿದೆ.