ನವದೆಹಲಿ, ಜ.23 (Daijiworld News/PY) : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರಕ್ಕೆ 80,000 ಕೋಟಿ ರೂ.ಗಳ ಅಭಿವೃದ್ಧಿ ಪ್ಯಾಕೇಜ್ ಅನ್ನು ಬುಧವಾರ ಮಂಜೂರು ಮಾಡಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮಾಹಿತಿ ನೀಡಿದೆ.
ಶಿಕ್ಷಣ, ಪ್ರವಾಸೋದ್ಯಮ, ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಉತ್ತೇಜನವನ್ನು ನೀಡಲು ಮಾತ್ರವಲ್ಲದೆ ಸಾವಿರಾರು ನಿರುದ್ಯೋಗಿ ಕಾಶ್ಮೀರಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಈ ನಿರ್ಧಾರ ಮಾಡಲಾಗಿದೆ. ಈ ಅಭಿವೃದ್ಧಿ ಪ್ಯಾಕೇಜ್ ಜಮ್ಮು-ಕಾಶ್ಮೀರದ ಜನರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಉನ್ನತೀಕರಿಸುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮಾರ್ಚ್ 2021ರ ವೇಳೆಗೆ ನೂತನವಾಗಿ ರಚಿಸಲಾದ ಕೇಂದ್ರಾಡಳಿತ ಪ್ರದೇಶದಲ್ಲಿ ಕನಿಷ್ಠ 25 ಯೋಜನೆಗಳು ಬರಲಿದ್ದು, ಈ ಯೋಜನೆಗಳು 25 ಸಾವಿರ ಕೋಟಿ ರೂ.ಗಳ ಮೌಲ್ಯವನ್ನು ಹೊಂದಿರುತ್ತದೆ ಜ.20 ರಂದೇ ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದರು. ಇದರ ಜೊತೆಗೆ ಜಮ್ಮು-ಕಾಶ್ಮೀರವನ್ನು ರಾಷ್ಟ್ರದ ಆಭರಣ ಎಂದು ಬಣ್ಣಿಸಿ, ದೊಡ್ಡ ಮೊತ್ತದ ಹೂಡಿಕೆಗಳನ್ನು ಆಕರ್ಷಿಸುವ ಆಶಯದೊಂದಿಗೆ ಕೇಂದ್ರ ಸರ್ಕಾರವು ಕೈಗಾರಿಕಾ ಪ್ಯಾಕೇಜ್ ಅನ್ನು ತರಲಿದೆ ಎಂದು ಪಿಯೂಷ್ ಗೋಯಲ್ ಹೇಳಿದ್ದರು.
ಇತ್ತೀಚಿಗಷ್ಟೇ ಜಮ್ಮು-ಕಾಶ್ಮೀರಕ್ಕೆ ಕೇಂದ್ರದ 36 ಸಚಿವರ ನಿಯೋಗ ಭೇಟಿ ನೀಡಿ ಅಲ್ಲಿನ ವಸ್ತುಸ್ಥಿತಿಯನ್ನು ಪರಿಶೀಲನೆ ಮಾಡಿದ್ದು, ಅದರ ಬೆನ್ನಲ್ಲೇ 80,000 ಕೋಟಿ ರೂ.ಗಳ ಅಭಿವೃದ್ಧಿ ಪ್ಯಾಕೇಜ್ ಅನ್ನು ಮಂಜೂರು ಮಾಡಿದೆ.