ಬೆಂಗಳೂರು, ಜ.23 (Daijiworld News/PY) : ಮಾಟ-ಮಂತ್ರ, ವಶೀಕರಣ, ಎಂಜಲು ಎಲೆ ಮೇಲೆ ಉರುಳುವ ಅಮಾನವೀಯ ಮಡೆಸ್ನಾನ ಸೇರಿದಂತೆ ಮತ್ತಿತರ ಅನಿಷ್ಟ ಪದ್ದತಿಗಳನ್ನು ಆಚರಿಸುವವರನ್ನು ಶಿಕ್ಷೆ ನೀಡಲು ಇರುವ ಮೌಢ್ಯ ನಿಷೇಧ ಕಾಯ್ದೆ ಅನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ.
ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಇದರ ಜಾಗೃತ ಆಧಿಕಾರಿಯಾಗಿದ್ದು, ಮೌಢ್ಯಾಚರಣೆ ಕಂಡುಬಂದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ಗೆ ದೂರು ನೀಡಬೇಕು. ಈ ವಿಚಾರವಾಗಿ ಪೊಲೀಸ್ ಇನ್ಸ್ಪೆಕ್ಟರ್ ಕಡ್ಡಾಯವಾಗಿ ಎಫ್ಐಆರ್ ದಾಖಲಿಸಿಕೊಳ್ಳಬೇಕು. ಸ್ವಯಂ ಪ್ರೇರಿತರಾಗಿ ಪೊಲೀಸ್ ಇನ್ಸ್ಪೆಕ್ಟರ್ ದೂರು ದಾಖಲಿಸಿಕೊಳ್ಳಬಹುದಾಗಿದೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೌಢ್ಯ ನಿಷೇಧ ಕಾಯ್ದೆಯನ್ನು ರೂಪಿಸಲು ತಜ್ಞರ ಸಮಿತಿಯನ್ನು ರಚಿಸಲಾಗಿತ್ತು, ಆದರೆ ತಜ್ಞರು ಸಲ್ಲಿಸಿದ್ದ ವರದಿಯಲ್ಲಿನ ಕೆಲವು ಶಿಫಾರಸುಗಳ ವಿಚಾರವಾಗಿ ಧಾರ್ಮಿಕ ಹಾಗೂ ರಾಜಕೀಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದು, ನಂತರ ಕೆಲವು ಅಂಶಗಳನ್ನು ಪರಿಷ್ಕರಿಸಿ ಮೌಢ್ಯ ನಿಷೇಧ ಕಾಯ್ದೆಗೆ ಒಪ್ಪಿ ಪಡೆದುಕೊಳ್ಳಲಾಗಿತ್ತು.
ಡಿ.2017ರಲ್ಲಿ ಮೌಢ್ಯ ನಿಷೇಧ ಕಾಯ್ದೆಯ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದ್ದು, ಕಾಯ್ದೆಯಲ್ಲಿ ಕಾನೂನಾತ್ಮಕ ತೊಡಕು ಇರುವ ಕಾರಣದಿಂದ ತಡೆಹಿಡಿಯಲಾಗಿತ್ತು. ಕಾನೂನಾತ್ಮಕ ಅಂಶವನ್ನು ತೆಗೆದು ಹಾಕಿದ ಬಳಿಕ ರಾಜ್ಯಪಾಲರ ಅನುಮತಿ ಪಡೆಯಲಾಯಿತಾದರೂ ಕಾಯ್ದೆ ಜಾರಿ ವಿಳಂಬವಾಯಿತು ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ನಿಷೇಧ :
- ಭಾನಾಮತಿ, ಮಾಟ-ಮಂತ್ರ ಮಾಡುವುದು, ಗುಪ್ತ ನಿಧಿ, ನಿಕ್ಷೇಪಗಳ ಅನ್ವೇಷಣೆಗಾಗಿ ವಾಮಾಚಾರ
- ವ್ಯಕ್ತಿಯ ದೇಹದ ಮೇಲೆ ಅಗೋಚರ ಶಕ್ತಿಯನ್ನು ಆಹ್ವಾನ ಮಾಡುವುದು ಅಥವಾ ಆ ವ್ಯಕ್ತಿ ಅಂಥ ಶಕ್ತಿಯನ್ನು ಹೊಂದಿದ್ದಾನೆ ಎಂದು ನಂಬಿಸುವುದು.
- ದೆವ್ವ ಉಚ್ಛಾಟನೆ ಮಾಡುವ ನೆಪದಲ್ಲಿ ವಿವಿಧ ರೀತಿಯ ಹಿಂಸೆ ನೀಡುವುದು.
- ನಿರ್ದಿಷ್ಟ ವ್ಯಕ್ತಿ ದುರಾದೃಷ್ಟಕ್ಕೆ ಕಾರಣ, ರೋಗಗಳನ್ನು ಹರಡುತ್ತಾನೆ ಎಂದು ಆರೋಪಿಸುವುದು. ಪಾಪಿ ಅಥವಾ ಪಾಪಾತ್ಮ ಎಂದು ಹೇಳುವುದು, ಸೈತಾನ ಅಥವಾ ಸೈತಾನನ ಅವತಾರವೆಂದು ಘೋಷಿಸುವುದು.
- ಮಂತ್ರ ಪಠಿಸಿ ದೆವ್ವಗಳನ್ನು ಆಹ್ವಾನಿಸುತ್ತೇವೆ ಎಂದು ಹೇಳಿ ಜನರಲ್ಲಿ ಗಾಬರಿ, ಭಯ ಹುಟ್ಟಿಸುವುದು.
- ವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳುವುದಕ್ಕೆ ಬದಲು, ದುಷ್ಟ ಮತ್ತು ಅಘೋರಿ ಕೃತ್ಯ ಆಚರಿಸಲು ಪ್ರೇರೇಪಿಸುವುದು
- ಬರಿಗೈ ಬೆರಳುಗಳಿಂದ ಶಸ್ತ್ರ ಚಿಕಿತ್ಸೆ, ಮಹಿಳೆಯ ಗರ್ಭದಲ್ಲಿನ ಭ್ರೂಣದ ಲಿಂಗ ಬದಲಾಯಿಸುವುದಾಗಿ ಹೇಳುವುದು.
- ತನ್ನಲ್ಲಿ ವಿಶೇಷ ಶಕ್ತಿ ಇದೆ. ಪವಿತ್ರಾತ್ಮದ ಅವತಾರ ಅಥವಾ ಹಿಂದಿನ ಜನ್ಮದಲ್ಲಿ ಪತಿ, ಪತ್ನಿ ಅಥವಾ ಅನೈತಿಕ ಸಂಬಂಧವಿದ್ದ ಪ್ರೇಮಿ ಆಗಿದ್ದೇವೆಂಬ ಭಾವನೆ ಉಂಟು ಮಾಡುವುದು.
- ಕೊಕ್ಕೆಯಿಂದ ನೇತು ಹಾಕುವುದು, ದೇಹಕ್ಕೆ ಚುಚ್ಚಿಕೊಂಡ ಕೊಕ್ಕೆಯ ಮೂಲಕ ರಥ ಎಳೆಯುವುದು.
- ಮಕ್ಕಳಿಗೆ ಚಿಕಿತ್ಸೆ ಹೆಸರಿನಲ್ಲಿ ಎತ್ತರದಿಂದ ಎಸೆಯುವುದು, ಮುಳ್ಳುಗಳ ಮೇಲೆ ಮಲಗಿಸುವುದು.
- ಋತುಮತಿ, ಬಾಣಂತಿಯನ್ನು ಒಂಟಿಯಾಗಿರುವಂತೆ ಮಾಡುವುದು, ಬೆತ್ತಲೆ ಸೇವೆ, ಬೆತ್ತಲೆ ಮೆರವಣಿಗೆ.
- ಪ್ರಾಣಿಯ ಕುತ್ತಿಗೆಯನ್ನು ಕಚ್ಚಿ ಕೊಲ್ಲುವುದು.
- ಸಾರ್ವಜನಿಕ ಅಥವಾ ಧಾರ್ಮಿಕ ಸ್ಥಳಗಳಲ್ಲಿ ವ್ಯಕ್ತಿಗಳು ಊಟ ಮಾಡಿ ಬಿಟ್ಟ ಎಲೆಗಳ ಮೇಲೆ ಉರುಳಾಡುವುದು.
- ಕೆಂಡ ಹಾಯುವ ಪದ್ಧತಿ ಆಚರಿಸುವಂತೆ ಬಲವಂತಪಡಿಸುವುದು.
- ಬಾಯಿ ಬೀಗ ಪದ್ಧತಿ, ಅಂದರೆ ನಾಲಗೆಯೂ ಸೇರಿದಂತೆ ಒಂದು ದವಡೆಯಿಂದ ಇನ್ನೊಂದು ದವಡೆಗೆ ಕಬ್ಬಿಣದ ಸಲಾಕೆ ತೂರಿಸುವುದು.
- ಭಾನಾಮತಿ ಹೆಸರಿನಲ್ಲಿ ಮನೆಗಳ ಮೇಲೆ ಕಲ್ಲು ತೂರುವುದು.
- ನಾಯಿ, ಹಾವು, ಚೇಳು ಕಡಿತಕ್ಕೆ ಔಷಧ ಮಾಡದೇ ಮಂತ್ರ, ತಂತ್ರ, ಗಂಧ– ದೋರ ಮತ್ತು ಅಂತಹ ವಸ್ತುಗಳಿಂದ ಚಿಕಿತ್ಸೆ.
- ಮೌಢ್ಯದ ಬಗ್ಗೆ ಜಾಹೀರಾತು ನೀಡುವುದು.
ನಿಷೇಧವಿಲ್ಲ :
- ಧಾರ್ಮಿಕ, ಅಧ್ಯಾತ್ಮಿಕ ಸ್ಥಳಗಳಲ್ಲಿ ಪ್ರದಕ್ಷಿಣೆ, ಯಾತ್ರೆ, ಪರಿಕ್ರಮ ಮತ್ತು ಪೂಜೆ.
- ಹರಿಕಥೆ, ಕೀರ್ತನೆ, ಪ್ರವಚನ, ಭಜನೆ, ಪ್ರಾಚೀನ ಮತ್ತು ಪಾರಂಪರಿಕ ಕಲಿಕೆಗಳು, ಕಲೆಗಳು, ಪದ್ಧತಿ ಮತ್ತು ಅದರ ಪ್ರಸಾರ.
- ದೈವಾಧೀನರಾದ ಸಂತರ ಪವಾಡದ ಬಗ್ಗೆ ಮಾತನಾಡುವುದು. ಪ್ರಚಾರ ಮಾಡುವುದು, ಸಾಹಿತ್ಯ ಪ್ರಸಾರ.
- ಮನೆ, ದೇವಾಲಯ, ದರ್ಗಾ, ಗುರುದ್ವಾರ, ಪಗೋಡ, ಚರ್ಚ್ ಅಂಥ ಧಾರ್ಮಿಕ ಸ್ಥಳಗಳಲ್ಲಿ ದೈಹಿಕವಾಗಿ ಹಾನಿ ಉಂಟು ಮಾಡದಿರುವ ಪ್ರಾರ್ಥನೆ, ಉಪಾಸನೆ, ಧಾರ್ಮಿಕ ಆಚರಣೆ.
- ಧರ್ಮಾಚರಣೆಗೆ ಅನುಸಾರವಾಗಿ ಮಕ್ಕಳ ಕಿವಿಗಳು, ಮೂಗು ಚುಚ್ಚುವುದು, ತಪ್ತ ಮುದ್ರಾಧಾರಣೆ, ಜೈನ ಸಂಪ್ರದಾಯದ ಕೇಶಲೋಚನ.
- ವಾಸ್ತುಶಾಸ್ತ್ರ ಸಲಹೆ, ಜ್ಯೋತಿಷ್ಯ ಮತ್ತು ಜ್ಯೋತಿಷ್ಯಗಳಿಂದ ಸಲಹೆ.
ಶಿಕ್ಷೆ :
ಮಾಟ, ಮಂತ್ರ, ತಂತ್ರ, ವಾಮಾಚಾರ ಮುಂತಾದವುಗಳಿಗೆ 1-7 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 5,000 ದಿಂದ 50,000ದವರೆಗೆ ದಂಡ ವಿಧಿಸಲಾಗುತ್ತದೆ.
ಮೌಢ್ಯ ನಿಷೇಧ ಲಾಯ್ದೆಯ ವಿಚಾರವಾಗಿ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಅರಿವು ಮೂಡಿಸು ಸಲುವಾಗಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಪ್ರತಿ 6 ತಿಂಗಳಿಗೊಮ್ಮೆ ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆ ನಡೆಸಲಾಗುವುದು. 6 ತಿಂಗಳಿಗೊಮ್ಮೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ವಿವಿಧ ಜಿಲ್ಲೆಗಳಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ನೀಡಬೇಕು.