ಲಕ್ನೋ, ಜ.23 (Daijiworld News/PY) : "ಆಝಾದಿ ಘೋಷಣೆಗಳನ್ನು ಕೂಗುವವರ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಿಸಲಾಗುವುದು ಹಾಗೂ ಅವರ ವಿರುದ್ದ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ" ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.
ಕಾನ್ಪುರ್ನಲ್ಲಿ ಸಿಎಎ ಪರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಭಾರತದಲ್ಲಿದ್ದುಕೊಂಡು ದೇಶದ ವಿರುದ್ದ ಸಂಚು ಮಾಡಲು ಯಾರಿಗೂ ಅನುಮತಿ ನೀಡಲಾಗುವುದಿಲ್ಲ. ಪ್ರತಿಭಟನೆಯ ನೆಪ ಮಾಡಿಕೊಂಡು ಕಾಶ್ಮೀರದಲ್ಲಿ ನಡೆದಂತೆ ಇಲ್ಲಿಯೂ ಕೂಡಾ ಆಝಾದಿ ಪರ ಘೋಷಣೆಗಳನ್ನು ಕೂಗಿದರೆ ಅವರ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಿಸಲಾಗುತ್ತದೆ" ಎಂದು ಹೇಳಿದರು.
"ಮಹಿಳೆಯರನ್ನು ಹಾಗೂ ಮಕ್ಕಳನ್ನು ಪ್ರತಿಭಟನೆ ನಡೆಸಲು ಕಳುಹಿಸಿ, ಪುರುಷರು ಮನೆಯಲ್ಲಿ ಆರಾಮವಾಗಿ ಇರುವುದು ನಾಚಿಕೆಗೇಡು. ತಾವಾಗಿಯೇ ಪ್ರತಿಭಟನೆ ಮಾಡಲು ಈ ಜನರಿಗೆ ಧೈರ್ಯವಿಲ್ಲ. ಅವರು ಪ್ರತಿಭಟನೆಯಲ್ಲಿ ತೊಡಗಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರೆ, ಯಾರು ಪ್ರತಿಭಟನೆಯಲ್ಲಿ ತೊಡಗಿದ್ದರೋ ಅವರ ಆಸ್ತಿಯಿಂದಲೇ ಸರಿಪಡಿಸಲಾಗುತ್ತದೆ. ಹಾಗಾಗಿ ಮುಂದಿನ ಪೀಳಿಗೆಯವರಿಗೂ ಇದು ನೆನಪಿರಬೇಕು" ಎಂದರು.
"ಸಿಎಎ ವಿಚಾರವಾಗಿ ವಿಪಕ್ಷಗಳು ರಾಜಕೀಯ ನಡೆಸುತ್ತಿವೆ, ಅಂಥವರಿಗೆ ದೇಶ ಮುಖ್ಯವಲ್ಲ, ಧರ್ಮ ಮುಖ್ಯವಲ್ಲ, ಐಎಸ್ಐ ಏಜೆಂಟರಿಗೆ ಭಾರತಕ್ಕೆ ಪ್ರವೇಶ ನೀಡುವ ತನಕ ಹೋರಾಟ ನಡೆಯಲಿದೆ ಎಂದು ಅವರು ಹೇಳಿದ್ದಾರೆ" ಎಂದು ಆದಿತ್ಯನಾಥ್ ಹೇಳಿದ್ದಾರೆ.