ಬೆಂಗಳೂರು, ಜ.23 (Daijiworld News/PY) : "ನಾವು ಎಡವಿದ ಕಾರಣದಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಬಲ ಕಡಿಮೆ ಇರುವ ಕಾರಣ ಸಿಎಎ ಕಾಯ್ದೆ ಜಾರಿಗೆ ಬರುವಂತಾಗಿದೆ. ಮುಸ್ಲಿಂ ಸಮುದಾಯದವರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಪರಿಗಣಿಸಲಾಗುತ್ತಿದೆ" ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ನಗರದ ಅರಮನೆ ಮೈದಾನದಲ್ಲಿ ಗುರುವಾರ ನಡೆದ ಪಕ್ಷದ ರಾಜ್ಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, "ದೇಶಕ್ಕೆ ಇಂದು ಗಂಡಾಂತರ ಎದುರಾಗಿದೆ. ಕಾಂಗ್ರೆಸ್ ನಿರ್ದಿಷ್ಟ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು, ಹಾಗೂ ಜನತೆ ಪ್ರಾದೇಶಿಕ ಪಕ್ಷಗಳನ್ನು ಬಲಪಡಿಸಬೇಕು. ಕಾಶ್ಮೀರದಲ್ಲಿ ಮುಖಂಡರನ್ನು 6 ತಿಂಗಳಿನಿಂದ ಗೃಹಬಂಧನದಲ್ಲಿ ಇರಿಸಿದ್ದಾರೆ. ಕೇಂದ್ರ ಸರ್ಕಾರದ ತೀರ್ಮಾನ ಸರಿಯಿಲ್ಲ. ಪಕ್ಷ ಇದನ್ನು ಖಂಡಿಸುತ್ತದೆ" ಎಂದು ತಿಳಿಸಿದರು.
"ಮುಸ್ಲಿಂ ಮಹಿಳೆಗೆ ಮೇಯರ್ ಸ್ಥಾನ ಕೊಟ್ಟು ಅವರಿಗೆ ಗೌರವ ನೀಡಲಾಗಿದೆ. ಮಹಿಳೆಯರಿಗೆ ಪಕ್ಷದಲ್ಲಿ ಅಧಿಕಾರ ಕೊಟ್ಟ ತೃಪ್ತಿ ಇದೆ. ಶೇ.33ರಷ್ಟು ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆಯನ್ನು ನಾನು 1996ರಲ್ಲಿ ಮಂಡಿಸಿದೆ, ಆದರೆ ಅದಕ್ಕೆ ಇದುವರೆಗೂ ಮುಕ್ತಿ ಸಿಕ್ಕಿಲ್ಲ. ಕುಮಾರಸ್ವಾಮಿ ಅವರು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದರೂ ಉಪಚುನಾವಣೆಯಲ್ಲಿ ಪಕ್ಷ ಸೋಲು ಕಂಡಿದೆ, ಇದೀಗ ಪಕ್ಷವನ್ನು ಮತ್ತೆ ಕಟ್ಟಿ ಬೆಳೆಸುವ ಸಲುವಾಗಿ ಮೊದಲ ಸಭೆ ನಡೆಸಲಾಗಿದೆ" ಎಂದರು.