ಚಿತ್ರದುರ್ಗ, ಜ.23 (Daijiworld News/PY) : "ಅಖಂಡ ಭಾರತ ನಿರ್ಮಾಣ ದೇಶ ಭಕ್ತರ ಕನಸು. ಭಯೋತ್ಪಾದನೆ ನಿಗ್ರಹ ಮಾಡಲು ಇದು ಅತ್ಯಗತ್ಯ. ಉಗ್ರ ಚಟುವಟಿಕೆಯಲ್ಲಿ ತೊಡಗಿದವರನ್ನು ಒದ್ದು ಹೊರಗೆ ಹಾಕುತ್ತೇವೆ" ಎಂದು ಸಂಸದ ಎ.ನಾರಾಯಣ ಸ್ವಾಮಿ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪಾಕಿಸ್ತಾನ ಹಾಗೂ ಬಾಂಗ್ಲಾದೇಶವನ್ನು ಸೇರಿಸಿ ಅಖಂಡ ಭಾರತ ನಿರ್ಮಾಣ ಮಾಡುವುದು ಬಿಜೆಪಿಯ ಉದ್ದೇಶ. ಈ ಎರಡೂ ರಾಷ್ಟ್ರಗಳಲ್ಲಿ ಹಿಂದುತ್ವವನ್ನು ಸಾರಿ ಹೇಳುತ್ತೇವೆ" ಎಂದು ಹೇಳಿದರು.
"ದೇಶದಲ್ಲಿ ಫ್ರೀ ಕಾಶ್ಮಿರಕ್ಕೆ ಕುಮ್ಮಕ್ಕು ನೀಡಿ ಮತ್ತೊಂದು ಪಾಕಿಸ್ತಾನ ಸೃಷ್ಟಿಸುವ ಸಂಚು ನಡೆಯುತ್ತಿದೆ. ಕಾಂಗ್ರೆಸ್, ವಿರೋಧ ಪಕ್ಷಗಳು ಈ ವಿಚಾರವಾಗಿ ಸಹಾಯ ಮಾಡುತ್ತಿವೆ. ಈ ದೇಶದ ಒಂದು ಇಂಚು ಭೂಮಿಯನ್ನು ಬೇರೆಯವರಿಗೆ ಬಿಟ್ಟು ಕೊಡುವುದಿಲ್ಲ" ಎಂದರು.
"ಮಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡುತ್ತಿದ್ದಾರೆ. ಆದಿತ್ಯ ರಾವ್ ಮಾನಸಿಕ ಅಸ್ವಸ್ಥ ಎನ್ನುವ ವಿಚಾರದ ಬಗ್ಗೆ ಇನ್ನೂ ತಿಳಿದಿಲ್ಲ" ಎಂದು ಹೇಳಿದರು.
"ಆರೋಪಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಪಾಕಿಸ್ತಾನದ ಏಜೆಂಟರಂತೆ ವರ್ತಿಸುತ್ತಿವೆ. ಬಾಂಬ್ ಸ್ಫೋಟದ ಹಿಂದೆ ವಿರೋಧ ಪಕ್ಷಗಳ ಕೈವಾಡ ಇರಬಹುದು" ಎಂದರು.