ಬೆಂಗಳೂರು: ಜ 23 (DaijiworldNews/SM): ರಾಜ್ಯದ ವಿವಿಧ ಭಾಗಗಳಲ್ಲಿ ಜನತೆ ಸ್ವಂತ ಜಮೀನಿಲ್ಲದೆ ಸರಕಾರಿ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿ ನೆಲೆಸಿದ್ದಾರೆ. ಅಂತಹವರಿಗೆ ಸರಕಾರದ ಒಂದು ನಿರ್ಧಾರ ಖುಷಿಯನ್ನು ನೀಡಿದೆ. ಅಕ್ರಮ ಸಕ್ರಮ ಯೋಜನೆಯಡಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿರುವ ಬಡವರಿಗೆ ಹಕ್ಕು ಪತ್ರ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ.
ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ಅವರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆಗಳನ್ನು ಸಕ್ರಮಗೊಳಿಸಲಾಗುವುದು. ಜ.28ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 10,000 ಬಡವರಿಗೆ ಹಕ್ಕು ಪತ್ರ ವಿತರಿಸಲಿದ್ದಾರೆ ಎಂದು ತಿಳಿಸಿದರು.
ಇನ್ನುಳಿದಂತೆ ರಾಜ್ಯಾದ್ಯಂತ ಸಮರೋಪಾದಿಯಲ್ಲಿ ಬಡವರಿಗೆ ಅಕ್ರಮ ಸಕ್ರಮ ಯೋಜನೆಯಡಿ ಹಕ್ಕುಪತ್ರ ವಿತರಣೆ ಕಾರ್ಯ ಪ್ರಗತಿಯಲ್ಲಿದ್ದು, ಎಲ್ಲರಿಗೂ ವಿತರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು. ವಾರ್ಷಿಕ ಆದಾಯವನ್ನು ಪರಿಗಣಿಸಿ ಬಡವರೆಂದು ಗುರಿತಿಸಿಕೊಂಡು ಹಕ್ಕುಪತ್ರ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ ಎಂದರು.