ಹೈದರಾಬಾದ್, ಜ 22 (DaijiworldNews/SM): ಕೇಂದ್ರ ಸರಕಾರದ ವಿರುದ್ಧ ನಟ ಪ್ರಕಾಶ್ ರೈ ಮತ್ತೆ ಗುಡುಗಿದ್ದಾರೆ. ದೇಶದೆಲ್ಲೆಡೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಪ್ರತಿಭಟನೆಗಳು ನಡೆಯುತ್ತಿರುವಾಗಲೇ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಕಾಶ್ ರೈ, ಕೇಂದ್ರ ಸರಕಾರ ದಾಖಲೆಗಳನ್ನು ತರಿಸುವುದಾದರೆ, ಈ ದೇಶದ ನಿರುದ್ಯೋಗಿ ಯುವಕರು, ಬಡವರು ಹಾಗೂ ಅನಕ್ಷರಸ್ಥರ ಬಗ್ಗೆ ದಾಖಲೆಗಳನ್ನು ತರಿಸಿಕೊಳ್ಳಲಿ ಎಂದಿದ್ದಾರೆ.
ದೇಶದಲ್ಲಿ ಕೇಂದ್ರ ಸರಕಾರ ಪೌರತ್ವ ನೋಂದಣಿ, ಪೌರತ್ವ ಕಾಯ್ದೆ, ಪೌರತ್ವ ತಿದ್ದುಪಡಿ ಹೆಸರಿನಲ್ಲಿ ನಾಟಕವಾಡುತ್ತಿದೆ ಎಂಬುವುದಾಗಿ ಅಸಮಾಧಾನ ಹೊರಹಾಕಿದ್ದಾರೆ. ಗುರುವಾರ ಹೈದರಾಬಾದ್ನಲ್ಲಿ ಸಿಎಎ, ಎನ್ಆರ್ಸಿ ಹಾಗೂ ಎನ್ಆರ್ಪಿ ವಿರೋಧಿಸಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರ ದಾಖಲೆಗಳನ್ನು ತಯಾರಿಸಲೇಬೇಕಾದರೆ, ದೇಶದ ಅಭಿವೃದ್ಧಿ ಬಗ್ಗೆ ದಾಖಲೆಗಳನ್ನು ತಯಾರಿಸಲಿ. ನಮಗೆ 3 ಸಾವಿರ ಕೋಟಿ ರೂಪಾಯಿ ಬೆಲೆ ಬಾಳುವ ಪ್ರತಿಮೆಗಳ ಅಗತ್ಯ ನಮಗಿಲ್ಲ. ಬದಲಿಗೆ ಎಲ್ಲಾ ಸಮುದಾಯಕ್ಕೂ ಅಭಿವೃದ್ಧಿ ಎಂದಿದ್ದಾರೆ.
ಸರ್ಕಾರ ಪ್ರತಿಭಟನಾಕಾರರನ್ನು ಹಿಂಸೆಗೆ ಪ್ರಚೋದಿಸುವಂತೆ ಮಾಡುತ್ತಿದೆ. ಆದರೆ, ದೇಶದ ತುಂಬ ಪ್ರತಿಭಟನಕಾರರು ತಾಳ್ಮೆಯಿಂದ ಹಾಗೂ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದಾರೆ. ಈ ದೇಶ ಎಲ್ಲರಿಗೂ ಸೇರಿದ್ದಾಗಿದ್ದು, ಕೇವಲ ಒಂದು ಸಮುದಾಯ, ಒಂದು ಪಕ್ಷದ ದೇಶವಲ್ಲ ಎಂದಿದ್ದಾರೆ.