ತಿರುವನಂತಪುರಂ, ಜ 24 (Daijiworld News/MB) : ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜನಕಾರಿ ಹೇಳಿಕೆ ನೀಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶೋಭಾ ಕರಂದ್ಲಾಜೆ ಅವರು, "ಕೇರಳವು ಇನ್ನೊಂದು ಕಾಶ್ಮೀರ ಆಗುವತ್ತ ಅಂಬೆಗಾಲು ಇಡುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡಿದ ಹಿನ್ನಲೆಯಲ್ಲಿ ಮಲಪ್ಪುರಂನ ಕುಟ್ಟಿಪುರಂ ಪಂಚಾಯತ್ನ ಹಿಂದೂಗಳಿಗೆ ನೀರು ಸರಬರಾಜು ಮಾಡುವುದನ್ನು ನಿರಾಕರಿಸಲಾಗಿದೆ. ಈ ಪ್ರದೇಶಕ್ಕೆ ಈಗ ಸೇವಾ ಭಾರತಿ ನೀರು ಸರಬರಾಜು ಮಾಡುತ್ತಿದೆ" ಎಂದು ಜನವರಿ 22ರಂದು ಟ್ವೀಟ್ ಮಾಡಿದ್ದರು.
ನಂತರ ಈ ಟ್ವೀಟ್, ಕುಟ್ಟಿಪುರಂ ಜನರ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುತ್ತದೆ ಎಂದು ಸುಪ್ರೀಂ ಕೋರ್ಟ್ ವಕೀಲ ಮತ್ತು ಮಲಪ್ಪುರಂ ಮೂಲದ ಸುಭಾಷ್ ಚಂದ್ರನ್ ಕೆ ಆರ್ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಹಾಗೆಯೇ ಈ ಪ್ರಕರಣದ ಮೊದಲ ಆರೋಪಿ ಶೋಭಾ ಕರಂದ್ಲಾಜೆ ಹಾಗು ಇತತರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿತ್ತು.
ಕೇರಳ ಪೊಲೀಸರು ಶೋಭಾ ಕರಂದ್ಲಾಜೆ ಅವರ ವಿರುದ್ಧ ಐಪಿಸಿ ಸೆಕ್ಷನ್ 153 ಎ (ಧರ್ಮ, ಜನಾಂಗ ಆಧಾರದವಾಗಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರು ಈ ಬಗ್ಗೆ ಸ್ಪಷ್ಟನೆ ನೀಡಿ, "ಈ ಪ್ರದೇಶದಲ್ಲಿ ಕಳೆದ 2 ತಿಂಗಳಿನಿಂದ ನೀರಿನ ಸಮಸ್ಯೆ ಉಂಟಾಗಿದೆ. ಹಾಗಾಗಿ ಹತ್ತಿರದ ವ್ಯಕ್ತಿಯೋರ್ವರು ಬೋರ್ನ ನೀರು ನೀಡುತ್ತಿದ್ದರು. ಆದರೆ ಈಗ ಕೇರಳ ರಾಜ್ಯ ವಿದ್ಯುತ್ ಮಂಡಳಿಯಿಂದ ಕೃಷಿ ಉದ್ದೇಶಕ್ಕಾಗಿ ಈ ಬೋರ್ ನೀರನ್ನು ಬಳಕೆ ಮಾಡಿದಲ್ಲಿ ನೀರು ನೀಡುವುದನ್ನು ನಿಲ್ಲಿಸಿದ್ದಾರೆ. ಆ ನಂತರ ಸೇವಾ ಭಾರತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿತ್ತು. ಅದನ್ನು ಶೋಭಾ ಕರಂದ್ಲಾಜೆ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ" ಎಂದು ಹೇಳಿದ್ದಾರೆ.