ಬೆಂಗಳೂರು, ಜ 24 (Daijiworld News/MB) : ಶಾಂತಿ ನಗರದ ಕಾಂಗ್ರೆಸ್ ಶಾಸಕ ಎಸ್.ಎ. ಹ್ಯಾರಿಸ್ ಅವರು ಪಾಲ್ಗೊಂಡಿದ್ದ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಸ್ಫೋಟವಾಗಿದ್ದು ಪಟಾಕಿಯೇ ಹೊರತು ಬಾಂಬ್ ಅಲ್ಲ ಎಂದು ಪೊಲೀಸರಿಂದ ತನಿಖೆಯಿಂದ ಖಚಿತವಾಗಿದೆ.
ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹುಟ್ಟುಹಬ್ಬ ಆಚರಣೆ ಹಿನ್ನಲೆಯಲ್ಲಿ ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಆ ಕಾರ್ಯಕ್ರಮಕ್ಕೆ ಶಾಸಕರು ಬರುವಾಗ ಅವರನ್ನು ಸ್ವಾಗತಿಸುವ ನಿಟ್ಟಿನಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿದ್ದಾರೆ. ಆದರೆ ರಾಕೆಟ್ ಮಾದರಿಯಲ್ಲಿ ಇರುವ ಪಟಾಕಿ ಆಕಾಶದಲ್ಲಿ ಸ್ಫೋಟವಾಗದೆ ವೇದಿಕೆ ಮೇಲೆ ಬಂದು ಬಿದ್ದಿದೆ. ಈ ಪರಿಣಾಮದಿಂದಾಗಿ ಶಾಸಕರು ಸೇರಿದಂತೆ ವೇದಿಕೆಯಲ್ಲಿದ್ದ ನಾಲ್ವರಿಗೆ ಗಾಯವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಈ ಘಟನೆ ನಡೆದ ಸ್ಥಳದಲ್ಲಿ ನಮಗೆ ಸಿಡಿಮದ್ದು ತಯಾರಿಗಾಗಿ ಬಳಕೆ ಮಾಡಲಾಗುವ ರಾಸಾಯನಿಕ ವಸ್ತುಗಳು ಹಾಗೂ ಸಿಲ್ವರ್ ಬಣ್ಣದ ಗುಂಡುಗಳು ಲಭಿಸಿದೆ. ಈ ಸಣ್ಣ ಗುಂಡುಗಳನ್ನು ಸ್ಫೋಟದ ತೀವ್ರತೆ ಹೆಚ್ಚು ಮಾಡುವ ಸಲುವಾಗಿ ಬಳಸಲಾಗುತ್ತದೆ. ಈ ಘಟನೆ ಆಕಸ್ಮಿಕವಾಗಿ ನಡೆದಿದೆಯೇ ಹೊರತು ಉದ್ದೇಶಪೂರ್ವಕವಾಗಿ ಮಾಡಲಾದ ಕೃತ್ಯವಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಈ ಕಾರ್ಯಕ್ರಮ ಆಯೋಜನೆ ಮಾಡಿರುವರನ್ನು ಹಾಗೂ ಸ್ಥಳೀಯರನ್ನು ವಿಚಾರಣೆ ಮಾಡಲಾಗಿದೆ. ಯಾರೂ ಕೂಡಾ ಭಯ ಪಡುವ ಅನಾಹುತ ಸಂಭವಿಸಿಲ್ಲ. ಕಚ್ಚಾ ಬಾಂಬ್ ಸಿಡಿದಿದೆ ಎಂಬುದು ಬರೀ ಊಹೆಯಷ್ಟೆ ಅದರಲ್ಲಿ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.
ಶಾಂತಿ ನಗರದ ಕಾಂಗ್ರೆಸ್ ಶಾಸಕ ಎಸ್.ಎ. ಹ್ಯಾರಿಸ್ ಅವರು ಭಾಗವಹಿಸಿದ್ದ ಹುಟ್ಟು ಹಬ್ಬ ಸಮಾರಂಭದಲ್ಲಿ ವಸ್ತುವೊಂದು ಸ್ಫೋಟವಾಗಿದ್ದು ಶಾಸಕ ಹ್ಯಾರಿಸ್ ಹಾಗೂ ಮೂವರಿಗೆ ಗಾಯವಾಗಿತ್ತು. ಇದೊಂದು ಪೂರ್ವನಿಯೋಜಿತ ಕೃತ್ಯ ಸ್ಫೋಟವಾಗಿದ್ದು ಕಚ್ಚಾ ಬಾಂಬ್ ಆಗಿರಬಹುದು ಎಂದು ಹ್ಯಾರಿಸ್ ಪುತ್ರ ನಲಪಾಡ್ ಆರೋಪಿಸಿದ್ದರು.