ಆಗ್ರಾ, ಜ 24 (Daijiworld News/MSP): ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎನ್ನೋದು ಈ ಪ್ರಕರಣದಲ್ಲಿ ನಿಜವೆಂದು ಕಾಣುತ್ತದೆ. ಈ ವಿಚಿತ್ರ ಪ್ರೇಮಪ್ರಕರಣವನ್ನು ಕಂಡು ಪೊಲೀಸರೇ ಪೇಚಿಗೆ ಸಿಲುಕಿದ್ದಾರೆ. ಏಳು ಮಕ್ಕಳ ತಾಯಿ ಅದಕ್ಕಿಂತ ಹೆಚ್ಚಾಗಿ ಏಳು ಮೊಮ್ಮಕ್ಕಳ ಅಜ್ಜಿಯಾಗಿರುವ 60 ವರ್ಷದ ಮಹಿಳೆಯು ಹಾಗೂ 22 ವರ್ಷದ ಯುವಕನ ಪ್ರೇಮ ಪ್ರಕರಣವನ್ನು ಕಂಡು ಪ್ರಕರಣವನ್ನು ಬಗೆಹರಿಸುವುದು ಹೇಗಪ್ಪಾ? ಎಂದು ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಮಹಿಳೆಯ ಪತಿ ಮತ್ತು ಮಗ ಉತ್ತರ ಪ್ರದೇಶದ ಆಗ್ರಾದ ಎಟ್ಮದುದ್ದೌಲಾ ಪೊಲೀಸ್ ಠಾಣೆಗೆ ಬಂದು ಯುವಕನೋರ್ವನ ವಿರುದ್ಧ ಆರೋಪಿಸಿ ದೂರು ನೀಡಲು ಬಂದಾಗ ವಿಚಿತ್ರ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. ಎಟ್ಮದುದ್ದೌಲಾ ಪೊಲೀಸ್ ಠಾಣೆಯ ಪ್ರಕಾಶ್ ನಗರದಲ್ಲಿ ಪ್ರಾರಂಭವಾದ 60-22 ವರ್ಷದ ಮಹಿಳೆ ಮತ್ತು ಯುವಕನ ಪ್ರೇಮಕಥೆಯಿಂದಾಗಿ ಈ ಪ್ರದೇಶದ ನಿವಾಸಿಗಳಿಗೆ ತೊಂದರೆಯಾಗಿದೆ ಎಂದೂ ಆರೋಪಿಸಲಾಗಿದೆ.
ಮಹಿಳೆಯ ಕುಟುಂಬದ ಸದಸ್ಯರು ಯುವಕನ ವಿರುದ್ದ ಆರೋಪಿಸಿ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದರಿಂದ ಯುವಕನೂ ಆತನ ಕುಟುಂಬದೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿದ್ದರಿಂದ ಪೊಲೀಸ್ ಠಾಣೆಯ ಮುಂದೆ ಈ ಎರಡು ಕುಟುಂಬಗಳ ಆರೋಪ - ಪ್ರತ್ಯಾರೋಪಗಳ ಪ್ರಹಸನವೇ ನಡೆದಿತ್ತು. ಈ ವೇಳೆ 22 ವರ್ಷದ ಯುವಕ " ನಾವಿಬ್ಬರೂ ಪ್ರೀತಿಸುತ್ತಿದ್ದು ಮದುವೆಯಾಗಲು ಬಯಸುತ್ತೇವೆ" ಎಂದು ಪ್ರತಿಪಾದಿಸಿದ್ದ.
ಇದರಿಂದ ವಿಚಲಿತರಾದ ಪೊಲೀಸರು, ವಯಸ್ಸಿನ ಅಂತರವಿರುವ ಈ ಬಂಧವನ್ನು ಸ್ವೀಕರಿಸಲು ಸಾಧ್ಯವಿಲ್ಲ, ಹೀಗಾಗಿ ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಕೊಂಡು ಪ್ರೀತಿಯನ್ನು ಮುಂದುವರಿಸಬಾರದು ಎಂದು ಪೊಲೀಸರು ಈ ಜೋಡಿಗಳಿಗೆ ಬುದ್ದಿವಾದ ಹೇಳಿದ್ದಾರೆ. ಆದರೆ ಇದನ್ನು ವಿರೋಧಿಸಿದ ಪ್ರೇಮಿಗಳು ಪ್ರತಿಭಟಿಸಲು ಪ್ರಯತ್ನಿಸುತ್ತಿದ್ದಂತೆ, ಆ ಪ್ರದೇಶದಲ್ಲಿ ಶಾಂತಿ ಭಂಗ ಉಂಟುಮಾಡಿದ 22 ವರ್ಷದ ಯುವಕನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈ ವಿಚಾರ ತಿಳಿದ ೬೦ರ ಮಹಿಳೆ ಆತನ ರಕ್ಷಣೆಗಾಗಿ ಧಾವಿಸಿ ಜಾಮೀನು ಅರ್ಜಿ ಸಲ್ಲಿಸಿದ್ದಾಳೆ.
ಈ ವಿಚಿತ್ರ ಪ್ರೇಮ ಪ್ರಕರಣ ಕಂಡು ಪೊಲೀಸರಿಗೆ ಕಾನೂನಿನ ಪ್ರಕಾರ ಯುವಕನಿಗೆ ಜಾಮೀನು ನೀಡುವುದನ್ನು ಬಿಟ್ಟರೆ ಬೇರೆ ದಾರಿಯಿರಲಿಲ್ಲ. ಪ್ರಕರಣ ಮುಂದೆ ಏನಾಯಿತು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.