ಚೆನ್ನೈ, ಜ 24 (Daijiworld News/MB) : ಪೆರಿಯಾರ್ ಪ್ರತಿಮೆಯನ್ನು ಧ್ವಂಸ ಮಾಡಿರುವ ಘಟನೆ ಚೆಂಗಲ್ ಪೇಟೆಯ ಕಲಿಯಾಪಟ್ಟೈ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಇತ್ತೀಚೆಗೆ ನಟ ರಜನಿಕಾಂತ್, ದ್ರಾವಿಡ ಚಳವಳಿಯ ರೂವಾರಿ, ವಿಚಾರವಾದಿ ಪೆರಿಯಾರ್ 1971ರಲ್ಲಿ ಸೀತೆ ಮತ್ತು ಶ್ರೀರಾಮನ ಬೆತ್ತಲೆ ಫೋಟೋಗಳ ಮೆರವಣಿಗೆ ನಡೆಸಿದ್ದರು ಎಂದು ಹೇಳಿಕೆ ನೀಡಿದ್ದು ಈ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾದಾಗಲು ನಾನು ಈ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದರು. ಇದಾದ ಬಳಿಕ ಪೆರಿಯಾರ್ ಪ್ರತಿಮೆ ಧ್ವಂಸ ಮಾಡಲಾಗಿದೆ.
ಪೆರಿಯಾರ್ ಪ್ರತಿಮೆಯ ಬಲ ಕೈ ಹಾಗೂ ಮುಖವನ್ನು ದುಷ್ಕರ್ಮಿಗಳು ಒಡೆದು ಹಾಕಿದ್ದು ಸ್ಥಳೀಯರು ಪ್ರತಿಮೆಗೆ ಹಾನಿ ಮಾಡಿದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿ ತನಿಖೆ ನಡೆಸಲಾಗುತ್ತಿದೆ.
ಇತ್ತೀಚೆಗೆ ನಟ ರಜನಿಕಾಂತ್ ತಮಿಳು ಮ್ಯಾಗಜೀನ್ ತುಘಲಕ್ 50ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, " 1971ರಲ್ಲಿ ಸೇಲಂನಲ್ಲಿ ಪೆರಿಯಾರ್ ರಾಮಸ್ವಾಮಿ ಅವರು ಬೃಹತ್ ರ್ಯಾಲಿಯಲ್ಲಿ ಶ್ರೀರಾಮಚಂದ್ರ ಹಾಗೂ ಸೀತೆಯ ನಗ್ನ ಚಿತ್ರಗಳನ್ನು ಮೆರವಣಿಗೆ ಮಾಡಿಸಿದ್ದರು. ಆದರೆ ಈ ಬಗ್ಗೆ ಯಾವ ಪತ್ರಿಕೆಗಳೂ ವರದಿ ಮಾಡಿಲ್ಲ. ಆದರೆ ಈ ಕುರಿತು ತುಘಲಕ್ ಪತ್ರಿಕೆ ಮಾತ್ರ ವರದಿ ಮಾಡಿ ಟೀಕೆ ಮಾಡಿತ್ತು" ಎಂದು ಹೇಳಿದ್ದರು.
ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಜನರು ಪ್ರತಿಭಟನೆ ನಡೆಸಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ ರಜನಿಕಾಂತ್ ಅವರು,"ನಾನು ಪತ್ರಿಕೆಯಲ್ಲಿ ಬಂದ ವರದಿಯ ಕುರಿತಾಗಿ ಮಾತನಾಡಿದ್ದೇನೆ. ಈ ಘಟನೆ ನಡೆದಿರುವುದು ನಿಜ. ಈಗ ಮರೆತಿದ್ದಾರೆ. ಹಾಗಿರುವಾಗ ನಾನು ಕ್ಷಮೆ ಕೇಳುವುದಿಲ್ಲ" ಎಂದು ಹೇಳಿದ್ದರು.