ಚಿತ್ರದುರ್ಗ, ಜ 24 (Daijiworld News/MB) : "ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಇತ್ತೀಚೆಗೆ ಪಾಕ್ ಮೇಲೆ ಬಹಳ ಪ್ರೀತಿ ಮೂಡುತ್ತಿದೆ. ಪಾಕ್ ಮೇಲೆ ಪ್ರೀತಿ ಇರುವ ಅವರು ಭಾರತ ದೇಶದಿಂದ ತೊಲಗಲಿ" ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ಶುಕ್ರವಾರ ಚಿತ್ರದುರ್ಗದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಮಾಜಿ ಪ್ರಧಾನಿ ಪುತ್ರ ಕುಮಾರ ಸ್ವಾಮಿಯವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಹಾಗಿದ್ದು ಈ ರೀತಿ ಮಾತನಾಡುವುದು ಸರಿಯಲ್ಲ" ಎಂದು ಹೇಳಿದ್ದಾರೆ.
"ಭಾರತ ಹಿಂದೂ ರಾಷ್ಟ್ರವಾಗಿದ್ದು ಇಲ್ಲಿ ಎಲ್ಲರೂ ಸಮಾನರಾಗಿ ಬಾಳಬೇಕು. ದೇಶ ಒಡೆಯುವ ಉದ್ದೇಶದಿಂದ ಈ ರೀತಿ ಮಾತನಾಡುವುದು ಸರಿಯಲ್ಲ. ದೇಶದ ಜನತೆ ಒಂದಾಗುತ್ತಿದ್ದಾರೆ. ಅವರುನ ವೋಟ್ ಬ್ಯಾಂಕ್ ಹೋಗುತ್ತಿದೆ ಎಂಬ ಕಾರಣದಿಂದಾಗಿ ಈ ರೀತಿ ಮಾತನಾಡುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಟೇಕ್ ಆಫ್ ಆಗಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, "ಸಿದ್ಧರಾಮಯ್ಯ ಅವರು ಇಂಗ್ಲೀಷ್ ಪದ ಬಳಸಿ ಟೀಕೆ ಮಾಡುತ್ತಾರೆ. ಇತ್ತೀಚಿಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾಣಿಸ್ತಿಲ್ಲ, ಅವರು ಯಾರಿಗೂ ಬೇಡದ ವ್ಯಕ್ತಿಯಾಗಿ ಬಿಟ್ಟಿದ್ದಾರೆ. ವಿಪಕ್ಷ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಲಾಭಿ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ಡೆತ್ ಆಗಿರುವ ಪಾರ್ಟಿಯಾಗಿದೆ. ಲೀಡರ್ಗಳು ಕೂಡಾ ಡೆತ್ ಆದವರಂತೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ" ಎಂದು ಹೇಳಿದರು.
ಹಾಗೆಯೇ "ಚೀನಾದಲ್ಲಿ ಪತ್ತೆಯಾಗಿರುವ ಕೊರೋನಾ ವೈರಸ್ ಭಾರತಕ್ಕೆ ಪ್ರವೇಶ ಮಾಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಏರ್ಪೋರ್ಟ್ನಲ್ಲಿ ತಂಡ ನಿಯೋಜನೆ ಮಾಡಲಾಗಿದೆ. ಚೀನಾದಲ್ಲಿ ಇರುವವರ ಕುಟುಂಬಗಳ ಬಗ್ಗೆಯೂ ನಿಗಾ ವಹಿಸಲಾಗಿದೆ" ಎಂದು ಹೇಳಿದರು.