ಬೆಂಗಳೂರು, ಜ 24 (Daijiworld News/MSP): ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ವೇಗೆ ನುಗ್ಗಿದ ಪ್ರಯಾಣಿಕರು ವಿಮಾನ ಹಾರಾಟ ವಿಳಂಬದಿಂದ ಸಿಟ್ಟಿಗೆದ್ದು ಪ್ರತಿಭಟನೆ ನಡೆಸಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣನಿಂದ ಥೈಲ್ಯಾಂಡ್ನ ಪುಕೆಟ್ಗೆ ತಡರಾತ್ರಿ 2:30 ಗಂಟೆಗೆ ಗೋ ಏರ್ ಬಸ್ ವಿಮಾನ ಪ್ರಯಾಣ ಬೆಳೆಸಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆಗಳಿಂದ ಗೋ ಏರ್ ಟೇಕಾಫ್ ಆಗದೆ, ಆರು ತಾಸು ಹೆಚ್ಚು ಕಾಯಿಸಿದ ಪರಿಣಾಮ ಪುಕೆಟ್ಗೆ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿದ್ದ 120 ಮಂದಿ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಯಿತು.
ತಡರಾತ್ರಿ 2:30ರ ಹೊರಡಬೇಕಾಗಿದ್ದ ವಿಮಾನ ಬೆಳಗ್ಗೆಯಾದರೂ ಟೇಕಾಫ್ ಆಗದೆ ಇರುವುದನ್ನು ಕಂಡ 120 ಮಂದಿ ಪ್ರಯಾಣಿಕರು ಬೆಳಗ್ಗೆ 8ರಿಂದ 9 ಗಂಟೆ ಮಧ್ಯೆದ ಅವಧಿಯಲ್ಲಿ ಏರ್ಪೋರ್ಟ್ ರನ್ ವೇಗೆ ನುಗ್ಗಿ ಇತರೆ ವಿಮಾನಗಳ ಹಾರಾಟ ತಡೆಯಲು ಯತ್ನಿಸಿ ಪ್ರತಿಭಟನೆ ನಡೆಸಿದರು. ಇನ್ನು ಕೆಲಸಕ್ಕೆ ಹಾಜರಾಗಿದ್ದ ಪೈಲಟ್ ಹಾಗೂ ಗಗನಸಖಿಯರು ಸಹ ಫ್ಲೈಟ್ ಟೇಕಾಫ್ ಆಗುತ್ತಿಲ್ಲ ಎಂದು ಪ್ರಯಾಣಿಕರನ್ನು ಬಿಟ್ಟು ತೆರಳಿದ್ದರು. ಪ್ರತಿಭಟನಕಾರರು ವಿಮಾನ ಕಲ್ಪಿಸದೆ ಬೇರೆ ಯಾವುದೇ ವಿಮಾನ ಹಾರಾಟ ಮಾಡಬಾರದು ಅಂತ ಪ್ರತಿಭಟನಾಕಾರರು ಆಗ್ರಹಿಸಿ ಗೋ ಏರ್ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿದ್ದರು.
ವಪ್ರಯಾಣಿಕರ ಆಕ್ರೋಶಕ್ಕೆ ತುತ್ತಾದ ಗೋ ಏರ್ ಸಿಬ್ಬಂದಿ ತಾಂತ್ರಿಕ ದೋಷ ಸರಿಪಡಿಸಿ ಬೆಳಗ್ಗೆ 10:40 ಗಂಟೆ ಗೋ ಏರ್ ವಿಮಾನ ಪುಕೆಟ್ ಕಡೆಗೆ ಹಾರಾಟ ನಡೆಸಿದೆ ಎಂದು ತಿಳಿದುಬಂದಿದೆ.