ನವದೆಹಲಿ, ಜ 24 (Daijiworld News/MB) : 'ನಾನು ರಾಜ್ಯ ರಾಜಕೀಯದಲ್ಲಿ ಹೊಸ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಕೂಡಾ ನಾನು ಹಿಂದುತ್ವವನ್ನು ತೊರೆದಿಲ್ಲ ಅಥವಾ ಬಣ್ಣವನ್ನೂ ಬದಲು ಮಾಡಲಿಲ್ಲ' ಎಂದು ಶಿವಸೇನಾ ಅಧ್ಯಕ್ಷ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಿಳಿಸಿದ್ದಾರೆ.
ಶಿವಸೇನೆಯ ಸಂಸ್ಥಾಪಕ ದಿವಂಗತ ಬಾಳಾ ಸಾಹೇಬ್ ಠಾಕ್ರೆ ಅವರ ಜನ್ಮ ದಿನಾಚರಣೆ ವೇಳೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಹಳೆಯ ಮಿತ್ರ ಪಕ್ಷದಿಂದ ಬೆನ್ನಿಗೆ ಚೂರಿ ಹಾಕಿದ ಹಿನ್ನಲೆಯಲ್ಲಿ ನಾವು ಬೇರೆ ದಾರಿಯನ್ನು ನೋಡಬೇಕಾಯಿತು. ಅವರು ನೀಡಿದ ಭರವಸೆಯನ್ನು ಈಡೇರಿಸದೆ ನಂಬಿಕೆಯನ್ನು ಹಾಳು ಮಾಡಿದ್ದಾರೆ. ನಾನು ಸುಳ್ಳು ಹೇಳುತ್ತೇನೆ ಎಂಬತ್ತೆ ಬಿಂಬಿಸಲು ಯತ್ನ ಮಾಡಿದ್ದರು. ಆ ಹಿನ್ನಲೆಯಲ್ಲಿ ನಾನು ಬೇರೆಯವರೊಂದಿಗೆ ಸೇರಿ ಸರ್ಕಾರ ರಚನೆ ಮಾಡಬೇಕಾಯಿತು. ಇದರ ಅರ್ಥ ನಾನು ಹಿಂದುತ್ವವನ್ನು ತೊರೆದಿದ್ದೇನೆ ಅಥವಾ ನನ್ನ ಬಣ್ಣ ಬದಲಾಗಿದೆ' ಎಂದು ಅಲ್ಲ ಹೇಳಿದ್ದಾರೆ.
'ನಮ್ಮ ಪಕ್ಷದ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರು ಅಂದು ಹೇಳಿದ ಮಾತು ಒಂದಲ್ಲ ಒಂದು ದಿನ ಶಿವಸೇನಾದವರೇ ಮುಖ್ಯಮಂತ್ರಿಯಾಗುತ್ತಾರೆ ಎಂಬುದು ನನಗೆ ನೆನಪಿದೆ. ಆ ಮಾತನ್ನು ನಾವು ಈಡೇರಿಸಿದ್ದೇವೆ. ನನ್ನ ಭರವಸೆಯನ್ನು ಈಡೇರಿಸುವಲ್ಲಿ ಇದು ಮೊದಲ ಹೆಜ್ಜೆ' ಎಂದರು.
ಕಾಂಗ್ರೆಸ್ ಮುಖಂಡ ಪೃಥ್ವಿರಾಜ್ ಚೌಹಾಣ್ ಅವರು 2014ರಲ್ಲಿಯೂ ಕೂಡ ಕಾಂಗ್ರೆಸ್ನೊಂದಿಗೆ ಸೇರಿ ಸರ್ಕಾರ ರಚಿಸಲು ಶಿವಸೇನಾ ಒಪ್ಪಿಕೊಂಡಿತ್ತು ಎಂದು ಹೇಳಿದ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, '2014ರಲ್ಲಿಯೂ ಕೂಡ ಬಿಜೆಪಿಯವರು ನಮ್ಮ ನಂಬಿಕೆಯನ್ನು ಮುರಿದರು. ಆಗ ನನಗೆ ನಾನು ಮುಖ್ಯಮಂತ್ರಿಯಾಗುವ ಯೋಚನೆಯಿರಲಿಲ್ಲ. ಆದರೆ ಈಗ ಪರಿಸ್ಥಿತಿಯೇ ಬೇರೆಯಿದೆ. ಹಾಗಾಗಿ ನಾನು ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ನಿರ್ಧಾರ ಮಾಡಿದೆ' ಎಂದು ಹೇಳಿದ್ದಾರೆ.
ಕಳೆದ ವರ್ಷದ ಅಕ್ಟೋಬರ್ನಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಂತರ ಠಾಕ್ರೆ ಬಿಜೆಪಿಯನ್ನು ಕೈಬಿಟ್ಟು, ರಾಜಕೀಯ ವಿರೋಧಿಗಳಾದ ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ಎನ್ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದರು.