ಬೆಂಗಳೂರು, ಜ.24 (Daijiworld News/PY) : "ಅರ್ಹ ಶಾಸಕರು ಪಕ್ಷಕ್ಕೆ ಬರುವಾಗ ಏನು ಒಪ್ಪಂದ ಆಗಿತ್ತೋ ಅದರಂತೆ ನಡೆದುಕೊಳ್ಳುತ್ತೇವೆ" ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, "ಸಚಿವ ಸಂಪುಟ ವಿಸ್ತರಣೆ ಮಾಡಲು ಬಿಜೆಪಿ ಹೈ ಕಮಾಂಡ್ನಿಂದ ಯಾವುದೇ ತಕರಾರು ಇಲ್ಲ" ಎಂದರು.
"ಪಕ್ಷಕ್ಕೆ ಬರುವಾಗ ಅರ್ಹ ಶಾಸಕರಿಗೆ ಏನು ಒಪ್ಪಂದ ಆಗಿತ್ತೋ ಅದೇ ರೀತಿ ನಡೆದುಕೊಳ್ಳುತ್ತೇವೆ. ಶುಕ್ರವಾರ ಸಿಎಂ ಬಿಎಸ್ ಯಡುಯೂರಪ್ಪ ಅವರು ದಾವೋಸ್ನಿಂದ ಪ್ರವಾಸ ಮುಗಿಸಿ ರಾಜ್ಯಕ್ಕೆ ವಾಪಾಸ್ ಆಗಲಿದ್ದಾರೆ. ಈ ಬೆನ್ನಲ್ಲೇ ಸಂಪುಟ ವಿಸ್ತರಣೆ ಮಾಡಲಾಗುವುದು" ಎಂದು ಹೇಳಿದರು.
"ಈ ವಿಚಾರವಾಗಿ ಈಗಾಗಲೇ 5 ಶಾಸಕರೊಂದಿಗೆ ಮಾತನಾಡಿದ್ದೇನೆ. ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆಗೆ ಮಾತನಾಡಲಿದ್ದಾರೆ. ಡಿಸಿಎಂ ಬದಲಾವಣೆ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ" ಎಂದರು.
ಬಿಜೆಪಿಯಲ್ಲಿ ಈಗಾಗಲೇ ಸಂಪುಟ ವಿಸ್ತರಣೆ ವಿಚಾರವಾಗಿ ತೀವ್ರ ಸ್ವರೂಪದ ಗೊಂದಲ ಪಡೆದುಕೊಳ್ಳುತ್ತಿದ್ದು, ನೂತನ 11 ಶಾಸಕರ ಪೈಕಿ ಕೇವಲ 6 ಜನಗರಿ ಮಾತ್ರ ಮಂತ್ರಿಸ್ಥಾನ ನೀಡುವ ವಿಚಾರವಾಗಿ ಮಾತುಕತೆಯಾಗುತ್ತಿದೆ. ಈ ಮಧ್ಯೆ ದಾವೋಸ್ನಿಂದ ಬಿಎಸ್ವೈ ರಾಜ್ಯಕ್ಕೆ ವಾಪಾಸ್ ಆಗಲಿದ್ದು, ನೂತನ ಶಾಸಕರನ್ನು ಭೇಟಿ ಮಾಡಿ ಮಾತನಾಡಲಿದ್ದಾರೆ. ಇದಾದ ನಂತರ ಸೋಮವಾರ ಮುಖ್ಯಮಂತ್ರಿ ಬಿಎಸ್ವೈ ಅವರು ದೆಹಲಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ.
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಮುಖಂಡರು ಬ್ಯುಸಿಯಾಗಿರುವ ಕಾರಣ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಹೆಚ್ಚು ಎಂದು ಮೂಲಗಳಿಂದ ತಿಳಿದುಬಂದಿದೆ.