ಬಾಗಲಕೋಟೆ, ಜ 24 (Daijiworld News/MB) : ರಾಜ್ಯದ ಮಸೀದಿಗಳಲ್ಲಿ ಮದ್ದು–ಗುಂಡು ಸಂಗ್ರಹ ಮಾಡಲಾಗಿದೆ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ನೀಡಿದ್ದು, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, 'ಯಾವ ಮಸೀದಿಯಲ್ಲಿ ಮದ್ದುಗುಂಡು ಸಂಗ್ರಹ ಮಾಡಲಾಗಿದೆ ಎಂದು ಹೇಳಲಿ ಇಲ್ಲದಿದ್ದಲ್ಲಿ ಕಾನೂನು ಕ್ರಮ ಎದುರಿಸಲಿ' ಎಂದು ತಿರುಗೇಟು ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, 'ಮಸೀದಿಯಲ್ಲಿ ಮದ್ದು–ಗುಂಡು ಸಂಗ್ರಹಿಸಿಡುವುದು ಬಹಳ ಗಂಭೀರವಾದ ವಿಚಾರ. ಆ ಹಿನ್ನಲೆಯಲ್ಲಿ ರೇಣುಕಾಚಾರ್ಯ ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಿ. ಕೇಂದ್ರ ಹಾಗೂ ರಾಜ್ಯದಲ್ಲಿ ಅವರದ್ದೆ ಸರ್ಕಾರ ಇದೆ ತನಿಖೆಯೂ ನಡೆಯಲಿ. ಇಲ್ಲದಿದ್ದಲ್ಲಿ ಉಡಾಫೆ ಹೇಳಿಕೆ ನೀಡಿರುವ ಹಿನ್ನಲೆಯಲ್ಲಿ ರಾಜ್ಯದ ಜನತೆಯಲ್ಲಿ ಕ್ಷಮೆ ಯಾಚಿಸಲಿ' ಎಂದು ಆಗ್ರಹಿಸಿದ್ದಾರೆ.
'ಇನ್ನು ಒಂದು ವಾರದಲ್ಲಿ ರೇಣುಕಾಚಾರ್ಯ ತಮ್ಮ ಹೇಳಿಕೆಗೆ ಸಾಕ್ಷಿ ನೀಡಲಿ. ಇಲ್ಲದಿದ್ದಲ್ಲಿ ಅವರ ವಿರುದ್ಧ ಬಾಗಲಕೋಟೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಲಾಗುವುದು. ಈಗಾಗಲೇ ಪಕ್ಷದ ಜಿಲ್ಲಾ ಘಟಕದಿಂದ ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗಿದೆ' ಎಂದು ತಿಳಿಸಿದರು.
'ಮಂದಿರ, ಮಸೀದಿ,ಚರ್ಚ್ಗಳಲ್ಲಿ ದೇವರಿದ್ದಾನೆ ಎಂದು ನಮ್ಮ ಜನರ ನಂಬಿಕೆ. ಆದರೆ ರೇಣುಕಾಚಾರ್ಯ ಅವರ ಈ ಬೇಜವಾಬ್ದಾರಿ ಹೇಳಿಕೆಯಿಂದ ಸಮಾಜದಲ್ಲಿ ಕಲುಷಿತ ವಾತಾವರಣ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಂತಹ ಹುದ್ದೆಯಲ್ಲಿ ಇರುವವರು ಅವರ ಘನತೆಗೆ ತಕ್ಕುದಾಗಿ ಗಂಭೀರವಾಗಿ ಮಾತನಾಡಬೇಕು' ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಅನಿಲ್ಕುಮಾರ ದಡ್ಡಿ, ನಾಗರಾಜ ಹದ್ಲಿ, ರಾಜು ಮನ್ನಿಕೇರಿ ಉಪಸ್ಥಿತರಿದ್ದರು.